1999ರ ವಿಶ್ವಕಪ್ ನಲ್ಲಿ ಕ್ಲೂಸ್ನರ್ ವೀರೋಚಿತ ಪ್ರದರ್ಶನ ಅತ್ಯುತ್ತಮ ವೈಯಕ್ತಿಕ ಪ್ರಯತ್ನಗಳಲ್ಲಿ ಒಂದಾಗಿದೆ: ಜಾಂಟಿ ರೋಡ್ಸ್
Photo: Twitter
ಜೋಹಾನ್ಸ್ ಬರ್ಗ್ : 1999ರಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ನಲ್ಲಿ ಲ್ಯಾನ್ಸ್ ಕ್ಲೂಸ್ನರ್ ಅವರ ವೀರೋಚಿತ ಪ್ರದರ್ಶನವು ಪಂದ್ಯಾವಳಿಯ ಇತಿಹಾಸದಲ್ಲಿ ಕಂಡುಬರುವ ಅತ್ಯುತ್ತಮ ವೈಯಕ್ತಿಕ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಗಳಲ್ಲಿ ಒಬ್ಬರಾದ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಲೆಜೆಂಡ್ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.
7ನೇ ಆವೃತ್ತಿಯ 50 ಓವರ್ಗಳ ವಿಶ್ವಕಪ್ ನಲ್ಲಿ 140.50 ರ ಸರಾಸರಿಯಲ್ಲಿ ಒಟ್ಟು 281 ರನ್ಗಳನ್ನುಕಲೆ ಹಾಕಿದ್ದ ಕ್ಲೂಸ್ನರ್ ಏಕದಿನ ಕ್ರಿಕೆಟ್ನ ಇತಿಹಾಸದಲ್ಲಿ ಕಂಡುಬರುವ ಕೆಲವು ಕಠಿಣ ಹೊಡೆತಗಳನ್ನು ಸೃಷ್ಟಿಸಿದ್ದರು. ದಕ್ಷಿಣ ಆಪ್ರಿಕಾ ತಂಡವನ್ನು,ಮೊದಲ ಬಾರಿ ವಿಶ್ವಕಪ್ ಪ್ರಶಸ್ತಿ ಸನಿಹ ಕೊಂಡೊಯ್ದರು.
ಸೆಮಿ ಫೈನಲ್ ತನಕ ತಲುಪಿರುವುದು ಏಕದಿನ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾದ ಶ್ರೇಷ್ಠ ಸಾಧನೆಯಾಗಿದೆ. ದಕ್ಷಿಣ ಆಫ್ರಿಕಾ 1992,1999 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ತಲುಪಿತ್ತು.
ಎಡ್ಜ್ ಬಾಸ್ಟನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಮಾಂಚಕಕಾರಿಯಾಗಿ ನಡೆದಿದ್ದ ಸೆಮಿ ಫೈನಲ್ನಲ್ಲಿ ಆಸ್ಟ್ರೇಲಿಯದ ಚಾಂಪಿಯನ್ ಸ್ಪಿನ್ನರ್ ಶೇನ್ ವಾರ್ನ್(4-29) ಅಮೋಘ ಪ್ರದರ್ಶನ ಹಾಗೂ ಗೆಲುವಿಗೆ 1 ರನ್ ಅಗತ್ಯವಿದ್ದಾಗ ಕೊನೆಯ ಓವರ್ ನ 4ನೇ ಎಸೆತದಲ್ಲಿ ಅಲನ್ ಡೊನಾಲ್ಡ್ ರನೌಟ್ ಆದ ಕಾರಣ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಫೈನಲ್ ನಲ್ಲಿ ಮೊದಲ ಬಾರಿ ಆಡುವ ಅವಕಾಶದಿಂದ ವಂಚಿತವಾಯಿತು. ಗೆಲ್ಲಲು 214 ರನ್ ಬೆನ್ಟಟ್ಟಿದ್ದ ದಕ್ಷಿಣ ಆಫ್ರಿಕಾ 49.4 ಓವರ್ ಗಳಲ್ಲಿ 213 ರನ್ ಗೆ ಆಲೌಟಾಗಿತ್ತು
ವಿಶ್ವಕಪ್ ನ ಇತ್ತೀಚಿನ ಆವೃತ್ತಿಗಳಲ್ಲಿ ಅನೇಕ ಆಟಗಾರರು ಕ್ಲೂಸ್ನರ್ ಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಎಡಗೈ ಆಟಗಾರ ಕ್ಲೂಸ್ನೆರ್ ಅವರಂತೆ 7ನೇ, 8ನೇ ಹಾಗೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಈ ರೀತಿಯ ಸಾಧನೆ ಯಾರೂ ಮಾಡಿಲ್ಲ. ಕ್ಲೂಸ್ನರ್ ಅವರ ಪ್ರಯತ್ನಗಳು ಈಗಲೂ ಸ್ಮರಣೀಯ ಎಂದು ರೋಡ್ಸ್ ಹೇಳಿದ್ದಾರೆ.
"ಅವರು (ಕ್ಲೂಸ್ನರ್) ಏಕಾಂಗಿಯಾಗಿ ನಮ್ಮನ್ನು 1999ರಲ್ಲಿ ಬಹುತೇಕ ಫೈನಲ್ ಗೆ ತಲುಪಿಸಿದ್ದರು. ನಾವು ಆಸ್ಟ್ರೇಲಿಯ ವಿರುದ್ಧ ಎಡ್ಜ್ ಬಾಸ್ಟನ್ ನಲ್ಲಿ ಸೆಮಿ-ಫೈನಲ್ ಪಂದ್ಯವನ್ನು ಟೈ ಮಾಡಿದ್ದೆವು. ಲ್ಯಾನ್ಸ್ ಕ್ಲೂಸ್ನರ್ 31 ರನ್ ಗಳಿಸಿ ಅಜೇಯರಾಗಿದ್ದರು. ಅವರು ಸಂಪೂರ್ಣ ಪಂದ್ಯಾವಳಿಯಲ್ಲಿ ಬಹುಮಟ್ಟಿಗೆ ಅಜೇಯರಾಗಿಯೇ ಉಳಿದಿದ್ದರು. ಅವರು ತಮ್ಮ ಸ್ಥಿರತೆ ಮತ್ತು ಶಕ್ತಿ ಮೂಲಕ ತುಂಬಾ ಕಠಿಣ ಸಂದರ್ಭಗಳಲ್ಲಿ ನಮಗೆ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು ಎಂದು ರೋಡ್ಸ್ ವಿಶ್ವಕಪ್ ನಲ್ಲಿ ಸಹ ಆಟಗಾರನ ಸಾಧನೆಯನ್ನು ಮೆಲುಕು ಹಾಕಿದರು.
1999ರಲ್ಲಿ ವಿಶ್ವಕಪ್ ನಂತರ ದಕ್ಷಿಣ ಆಪ್ರಿಕಾಕ್ಕೆ ಮರಳಿದ ಕ್ಲೂಸ್ನರ್ ಹಾಗೂ ಡೊನಾಲ್ಡ್ ಅಭಿಮಾನಿಗಳ ಅಸಮಾಧಾನ ಎದುರಿಸಿದರು. ನಾನು ಸೇರಿದಂತೆ ಬ್ಯಾಟರ್ ಗಳ ಪ್ರದರ್ಶನದ ಬಲದಿಂದ ಫೈನಲ್ ಗೆ ತಲುಪುದೇ ಇರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದರು. ಆಗ ಸಾಕಷ್ಟು ಟೀಕೆಗಳು ಎದುರಾದವು. ಜಾಕಸ್ ಕಾಲೀಸ್ ಹಾಗೂ ನನ್ನಂತಹ ಬ್ಯಾಟರ್ ಗಳು ಟೀಕೆಗಳನ್ನು ನಿಭಾಯಿಸಬೇಕಾಯಿತು.
ಅಲನ್ ಡೊನಾಲ್ಡ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಟೀಕೆಗಳಿಗೆ ಉತ್ತರಿಸಿದರು. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡರು. ನಮಗೆ ಮೊದಲ ಬಾರಿ ವಿಶ್ವಕಪ್ ಫೈನಲ್ ತಲುಪಲು ಉತ್ತಮ ಅವಕಾಶ ಲಭಿಸಿತ್ತು. ಕೊನೆಯ ಬ್ಯಾಟಿಂಗ್ ಜೋಡಿಯ ಮೇಲೆ ಸಾಕಷ್ಟು ಟೀಕೆಗಳು ಕೇಳಿಬಂದವು ಎಂದು 1999ರ ವಿಶ್ವಕಪ್ ಸೆಮಿ ಫೈನಲ್ ಸೋಲಿನ ಕುರಿತು ರೋಡ್ಸ್ ಹೇಳಿದ್ದಾರೆ.