2026ರ ಆವೃತ್ತಿಯ ಫಿಫಾ ವಿಶ್ವಕಪ್ ಆಡುವತ್ತ ಮೆಸ್ಸಿ ಚಿತ್ತ
Photo : AFP
ಬ್ಯುನಸ್ ಐರಿಸ್, ಅ.28: ಅರ್ಜೆಂಟೀನದ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಉತ್ತರ ಅಮೆರಿಕದಲ್ಲಿ 2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಆಡುವ ಆಶಯವನ್ನು ಹೊಂದಿದ್ದಾರೆ. ತನ್ನ ವಯಸ್ಸು ಹಾಗೂ ಫಿಟ್ನೆಸ್ ಅರ್ಜೆಂಟೀನದ 2022ರ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಮೆಸ್ಸಿ ಒಪ್ಪಿಕೊಂಡಿದ್ದಾರೆ.
ಮೆಸ್ಸಿ ಅವರು ಇತ್ತೀಚೆಗೆ ಪ್ರಮುಖ ಫುಟ್ಬಾಲ್ ಲೀಗ್ ತಂಡ ಇಂಟರ್ ಮಯಾಮಿಯೊಂದಿಗೆ ತನ್ನ ಒಪ್ಪಂದದ ಅವಧಿಯನ್ನು 2028ರ ತನಕ ವಿಸ್ತರಿಸಿದ್ದಾರೆ. ಜೂನ್‌ನಲ್ಲಿ 39ನೇ ವಯಸ್ಸಿಗೆ ಕಾಲಿಡಲಿರುವ ಮೆಸ್ಸಿ ಅವರು ಈ ತನಕ ನಿವೃತ್ತಿಯ ಯೋಜನೆ ಪ್ರಕಟಿಸಿಲ್ಲ.
ಮುಂದಿನ ವರ್ಷ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಬೇಕೇ ಎಂದು ನಿರ್ಧರಿಸುವ ಮೊದಲು ತನ್ನ ದೈಹಿಕ ಸ್ಥಿತಿಯನ್ನು ನಿರ್ಣಯಿಸಲು ಸಮಯ ತೆಗೆದುಕೊಳ್ಳುವುದಾಗಿ ಎಂಟು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿರುವ ಮೆಸ್ಸಿ, ‘ಎನ್‌ಬಿಸಿ ನ್ಯೂಸ್’ಗೆ ತಿಳಿಸಿದ್ದಾರೆ.
‘‘ನನಗೆ ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾದರೆ ಅದು ಅಸಾಧಾರಣ ಸಂಗತಿಯಾಗಲಿದೆ. ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತೇನೆ. ವಿಶ್ವಕಪ್‌ನಲ್ಲಿ ನನ್ನ ತಂಡಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಭಾಗವಾಗಲು ಬಯಸುತ್ತೇನೆ.ನಾನು ಶೇ.100ರಷ್ಟು ಫಿಟ್ ಇದ್ದೇನೆಯೇ ಎಂಬ ಕುರಿತು ನಿರ್ಧರಿಸಲಿದ್ದೇನೆ. ಇದು ವಿಶ್ವಕಪ್ ಆಗಿರುವುದರಿಂದ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ರಾಷ್ಟ್ರೀಯ ತಂಡದೊಂದಿಗೆ ಆಡುವುದು ಯಾವಾಗಲೂ ಕನಸಾಗಿರುತ್ತದೆ’’ಎಂದು ಮೆಸ್ಸಿ ಹೇಳಿದ್ದಾರೆ.
2004ರಲ್ಲಿ ತನ್ನ 17ನೇ ವಯಸ್ಸಿನಲ್ಲಿ ಬಾರ್ಸಿಲೋನ ಪರ ಚೊಚ್ಚಲ ಪಂದ್ಯ ಆಡಿದ್ದ ಮೆಸ್ಸಿ ವೃತ್ತಿ ಬದುಕಿನಲ್ಲಿ 2 ದಶಕಗಳನ್ನು ಕಳೆದಿದ್ದಾರೆ. ಪ್ಯಾರಿಸ್ ಸೇಂಟ್ ಜರ್ಮೈನ್ ಪರ ಆಡಿದ್ದ ಮೆಸ್ಸಿ 2023ರಲ್ಲಿ ಇಂಟರ್ ಮಯಾಮಿಗೆ ಸೇರ್ಪಡೆಯಾಗಿದ್ದರು. ಕ್ಲಬ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಗಳಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ಮೆಸ್ಸಿ ಅವರು 2021ರಲ್ಲಿ ಕೊಪಾ ಅಮೆರಿಕ ಪ್ರಶಸ್ತಿ ವಂಚಿತರಾಗಿದ್ದರು. 2022ರಲ್ಲಿ ಖತರ್‌ನಲ್ಲಿ ನಡೆದಿದ್ದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅರ್ಜೆಂಟೀನ ತಂಡವು ಪೆನಾಲ್ಟಿ ಕಾರ್ನರ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸುವಲ್ಲಿ ಮೆಸ್ಸಿ ತಂಡದ ಸಾರಥ್ಯ ವಹಿಸಿದ್ದರು.
ಮೆಸ್ಸಿ ಈ ತನಕ ಅರ್ಜೆಂಟೀನದ ಪರ 195 ಪಂದ್ಯಗಳನ್ನು ಆಡಿದ್ದು, 114 ಗೋಲುಗಳನ್ನು ದಾಖಲಿಸಿದ್ದಾರೆ. ಒಂದು ವೇಳೆ 2026ರ ವಿಶ್ವಕಪ್‌ನಲ್ಲಿ ಆಡಿದರೆ 6ನೇ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಂತಾಗುತ್ತದೆ.