ಲಿಯೊನೆಲ್ ಮೆಸ್ಸಿ ಮುಂದಾಳತ್ವದ ಇಂಟರ್ ಮಿಯಾಮಿಗೆ ಎಂಎಲ್ಎಸ್ ಕಪ್
Photo : PTI
ಫ್ಲೋರಿಡಾ: ಲಿಯೊನೆಲ್ ಮೆಸ್ಸಿ ಅವರಿಂದ ಪ್ರೇರಣೆ ಪಡೆದ ಇಂಟರ್ ಮಿಯಾಮಿ ಫುಟ್ಬಾಲ್ ತಂಡವು ವ್ಯಾಂಕೋವರ್ ವೈಟ್ಕ್ಯಾಪ್ಸ್ ತಂಡದ ವಿರುದ್ಧ 3-1 ಗೋಲುಗಳ ಅಂತರದಿಂದ ಜಯಶಾಲಿಯಾಗಿ ಮೊದಲ ಬಾರಿ ಎಂಎಲ್ಎಸ್ ಕಪ್ ಪ್ರಶಸ್ತಿಗೆ ಮುತ್ತಿಟ್ಟಿದೆ.
ಅರ್ಜೆಂಟೀನದ ಸೂಪರ್ಸ್ಟಾರ್ ಮೆಸ್ಸಿ ಎರಡು ಗೋಲು ಗಳಿಸಲು ಅಸಿಸ್ಟ್ ಮಾಡಿದರು.
ಎಡಿಯೆರ್ ಒಕಾಂಪೊ ಅವರ ಸ್ವಯಂ ಗೋಲಿನಿಂದಾಗಿ ಮಿಯಾಮಿ ತಂಡವು 8ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ಅಲಿ ಮುಹಮ್ಮದ್ 60ನೇ ನಿಮಿಷದಲ್ಲಿ ಗೋಲು ಗಳಿಸಿ ವ್ಯಾಂಕೋವರ್ ತಂಡ ಸಮಬಲ ಸಾಧಿಸುವಲ್ಲಿ ನೆರವಾದರು.
ಆ ನಂತರ ಮೆಸ್ಸಿ ಅವರು ಅರ್ಜೆಂಟೀನ ಅಂತರ್ರಾಷ್ಟ್ರೀಯ ತಂಡದ ಸಹ ಆಟಗಾರ ರೊಡ್ರಿಗೊ ಡಿ ಪೌಲ್ಗೆ 71ನೇ ನಿಮಿಷದಲ್ಲಿ ಗೋಲು ಗಳಿಸಲು ಅಸಿಸ್ಟ್ ಮಾಡಿ ಮಿಮಾಮಿ ತಂಡ 2-1 ಮುನ್ನಡೆ ಪಡೆಯಲು ನೆರವಾದರು. ಇಂಜುರಿ ಟೈಮ್ನಲ್ಲಿ(90+6) ಟಾಡಿಯೊ ಅಲೆಂಡೆ ಗೋಲು ಗಳಿಸಲು ಮೆಸ್ಸಿ ಪಾಸ್ ನೀಡಿದರು. ಈ ಮೂಲಕ ಮಿಯಾಮಿ ತಂಡಕ್ಕೆ 3-1 ಅಂತರದ ಗೆಲುವು ಖಚಿತಪಡಿಸಿದರು.
ಮಿಯಾಮಿ ಮೊದಲ ಬಾರಿ ಪ್ರಮುಖ ಲೀಗ್ ಸಾಕರ್ ಪ್ರಶಸ್ತಿಯನ್ನು ಗೆದ್ದ ಕಾರಣ ಸಹ ಮಾಲಕ, ಇಂಗ್ಲೆಂಡ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ನ ಮಾಜಿ ಆಟಗಾರ ಡೇವಿಡ್ ಬೆಕ್ಹ್ಯಾಮ್ ಸಂಭ್ರಮಪಟ್ಟರು.
‘‘ನಾನು ಸಾಕಷ್ಟು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದೆ. ಆದರೆ ನನಗೆ ಯಾವಾಗಲೂ ನಂಬಿಕೆ ಇತ್ತು. ತಂಡವನ್ನು ಇಲ್ಲಿಯ ತನಕ ತಲುಪಿಸುವ ನಂಬಿಕೆ ಇತ್ತು. ಸರಿಯಾದ ಜೊತೆಗಾರರನ್ನು ಪಡೆದರೆ ಎಲ್ಲವೂ ಸಾಧ್ಯ ಎಂದು ಗೊತ್ತಿತ್ತು’’ಎನ್ನುವುದಾಗಿ ಬೆಕ್ಹ್ಯಾಮ್ ಹೇಳಿದರು.
ಜರ್ಮನಿಯ ಲೆಜೆಂಡ್ ಥಾಮಸ್ ಮುಲ್ಲರ್ ಮುಂದಾಳತ್ವದ ವ್ಯಾಂಕೋವರ್ ತಂಡವು 8ನೇ ನಿಮಿಷದ ಸ್ವಯಂ ಗೋಲಿನಿಂದ ಚೇತರಿಸಿಕೊಂಡು ಅಲಿ ಅಹ್ಮದ್ 60ನೇ ನಿಮಿಷದಲ್ಲಿ ಗಳಿಸಿದ ಗೋಲು ನೆರವಿನಿಂದ ಸಮಬಲ ಸಾಧಿಸಿತು. ಆದರೆ ಪಂದ್ಯ ಗೆಲ್ಲಲು ವಿಫಲವಾಯಿತು.