ಮೆಸ್ಸಿ ಭಾರತ ಪ್ರವಾಸ ಕೊನೆಗೂ ದೃಢ: ಕೇರಳದಲ್ಲಿ ಸೌಹಾರ್ದ ಪಂದ್ಯದಲ್ಲಿ ಆಡಲಿರುವ ಅರ್ಜೆಂಟಿನಾ ತಂಡ
ಲಿಯೋನೆಲ್ ಮೆಸ್ಸಿ (Photo credit: AP/PTI)
ತಿರುವನಂತಪುರ: ಫುಟ್‌ಬಾಲ್ ತಾರೆ, ಅರ್ಜೆಂಟಿನಾದ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಕೇರಳಕ್ಕೆ ಬರುವ ಕುರಿತು ಕೆಲವು ತಿಂಗಳಿನಿಂದ ಸುದ್ದಿಯಾಗುತ್ತಿದ್ದು, ಇದೀಗ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಭಾರತದಲ್ಲಿ ಆಡಲು ಸಜ್ಜಾಗಿದೆ ಎಂದು ಕೇರಳ ಸರಕಾರ ಮೆಸ್ಸಿ ಭೇಟಿಯನ್ನು ಖಚಿತಪಡಿಸಿದೆ.
ಮೆಸ್ಸಿ ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಸೌಹಾರ್ದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಶನಿವಾರ ಹೇಳಿದ್ದಾರೆ.
ಇದೇ ವರ್ಷ ಭೇಟಿ ನೀಡುವ ನಮ್ಮ ಕೋರಿಕೆಯನ್ನು ಅವರು ಒಪ್ಪಿಕೊಂಡಿದ್ದಾರೆ. 2022ರ ವಿಶ್ವಕಪ್ ವಿಜೇತ ತಂಡವನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಕೇರಳದಲ್ಲಿ ಆಯೋಜನೆಗೊಳ್ಳಲಿರುವ ಪಂದ್ಯಾವಳಿಗಾಗಿ ಫಿಫಾದ ಅಗ್ರ 50ರ ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಆಸ್ಟ್ರೇಲಿಯಾ ತಂಡ ಉತ್ಸುಕತೆ ತೋರಿದೆ. ಅವರೊಂದಿಗೆ ಕ್ರೀಡಾ ವಿನಿಮಯದ ಒಪ್ಪಿಗೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ 2011ರಲ್ಲಿ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡವು ವೆನೆಜುವೆಲಾ ವಿರುದ್ಧ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಡಿತ್ತು.