×
Ad

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಮಾರ್ಕಸ್ ಸ್ಟೊಯಿನಿಸ್ ನಿವೃತ್ತಿ

Update: 2025-02-06 23:12 IST

Photo - indianexpress

ಮೆಲ್ಬರ್ನ್: ಆಸ್ಟ್ರೇಲಿಯದ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರು ಟಿ20 ಕ್ರಿಕೆಟ್ ನತ್ತ ಹೆಚ್ಚು ಗಮನ ನೀಡುವ ಸಲುವಾಗಿ ಏಕದಿನ ಕ್ರಿಕೆಟ್ ಅಂತರರಾಷ್ಟ್ರೀಯ ಪಂದ್ಯದಿಂದ ಗುರುವಾರ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.

‘‘ಆಸ್ಟ್ರೇಲಿಯಾದ ಪರ ಏಕದಿನ ಕ್ರಿಕೆಟ್ ಪಂದ್ಯ ಆಡುವುದು ಅದ್ಭುತ ಪ್ರಯಾಣವಾಗಿತ್ತು. ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವುದು ನನಗೆ ಯಾವಾಗಲೂ ಖುಷಿಯ ವಿಚಾರವಾಗಿದೆ. ಇದು ಸುಲಭದ ನಿರ್ಧಾರವಾಗಿರಲಿಲ್ಲ, ಏಕದಿನ ಕ್ರಿಕೆಟ್ ಪಂದ್ಯದಿಂದ ದೂರ ಸರಿದು ನನ್ನ ವೃತ್ತಿಜೀವನದ ಮುಂದಿನ ಅಧ್ಯಾಯದತ್ತ ಸಂಪೂರ್ಣವಾಗಿ ಗಮನಹರಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದ್ದೇನೆ. ಕೋಚ್ ಆ್ಯಂಡ್ರೂ ಮೆಕ್ಡೊನಾಲ್ಡ್ ಅವರ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ’’ಎಂದು ಹೇಳಿಕೆಯೊಂದರಲ್ಲಿ ಸ್ಟೊಯಿನಿಸ್ ತಿಳಿಸಿದ್ದಾರೆ.

35ರ ಹರೆಯದ ಸ್ಟೊಯಿನಿಸ್ ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯ ಪ್ರಕಟಿಸಿರುವ ತಾತ್ಕಾಲಿಕ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರು ಈ ಟೂರ್ನಿಯಲ್ಲಿ ಆಡುವುದಿಲ್ಲ.

2024ರ ನವೆಂಬರ್ನಲ್ಲಿ ಪರ್ತ್ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದಾರೆ. 71 ಪಂದ್ಯಗಳಲ್ಲಿ 1,495 ರನ್ ಗಳಿಸಿದ್ದಲ್ಲದೆ, 48 ವಿಕೆಟ್ ಗಳನ್ನು ಉರುಳಿಸಿದ್ದರು. 2023ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿರುವ ಸ್ಟೊಯಿನಿಸ್, 2018-19ರಲ್ಲಿ ತನ್ನ ದೇಶದ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News