ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಮ್ಯಾಥ್ಯೂ ಬ್ರೀಟ್ಝ್ಕೆ | PTI
ಲಾಹೋರ್: ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಬ್ರೀಟ್ಝ್ಕೆ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ತನ್ನ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(150 ರನ್) ದಾಖಲಿಸಿದ ಏಕೈಕ ಅಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.
ನ್ಯೂಝಿಲ್ಯಾಂಡ್ ವಿರುದ್ಧ ಸೋಮವಾರ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಈ ಸಾಧನೆ ಮಾಡಿದರು.
ಬ್ರೀಟ್ಝ್ಕೆ 11 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಾಯದಿಂದ 148 ಎಸೆತಗಳಲ್ಲಿ 150 ರನ್ ಗಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ. 1978ರಲ್ಲಿ ಆಸ್ಟ್ರೇಲಿಯದ ವಿರುದ್ಧ ವೆಸ್ಟ್‌ಇಂಡೀಸ್‌ನ ಡೆಸ್ಮಂಡ್ ಹೇನ್ಸ್ ನಿರ್ಮಿಸಿದ್ದ (148 ರನ್)ದಾಖಲೆಯನ್ನು ಮುರಿದರು. ಬ್ರೀಟ್ಝ್ಕೆ ತನ್ನ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ದ.ಆಫ್ರಿಕಾದ 4ನೇ ಆಟಗಾರ ಎನಿಸಿಕೊಂಡರು.
ಕಾಲಿನ್ ಇನ್‌ಗ್ರಾಮ್, ಟೆಂಬಾ ಬವುಮಾ ಹಾಗೂ ರೀಝಾ ಹೆಂಡ್ರಿಕ್ಸ್ ಅವರಿದ್ದ ಪಟ್ಟಿಗೆ ಸೇರ್ಪಡೆಯಾದರು.
ದಕ್ಷಿಣ ಆಫ್ರಿಕಾದ ಪರ ಮೊತ್ತ ಮೊದಲ ಏಕದಿನ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯು ಈ ಹಿಂದೆ ಕಾಲಿನ್ ಇನ್‌ಗ್ರಾಂ ಹೆಸರಲ್ಲಿತ್ತು. ಇನ್‌ಗ್ರಾಂ 2010ರಲ್ಲಿ ಝಿಂಬಾಬ್ವೆ ವಿರುದ್ಧ 124 ರನ್ ಸಿಡಿಸಿದ್ದರು.
ಬ್ರೀಟ್ಝೆಭರ್ಜರಿ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಸೋಮವಾರ ನ್ಯೂಝಿಲ್ಯಾಂಡ್ ವಿರುದ್ಧ 6 ವಿಕೆಟ್‌ಗಳ ನಷ್ಟಕ್ಕೆ 304 ರನ್ ಗಳಿಸಿತು. 26ರ ಹರೆಯದ ಬ್ಯಾಟರ್‌ಗೆ ಜಮಿ ಸ್ಮಿತ್(41 ರನ್)ಹಾಗೂ ವಿಯಾನ್ ಮುಲ್ದರ್(64 ರನ್)ಮಾತ್ರ ಸಾಥ್ ನೀಡಿದರು.
ಅಗ್ರ ಸರದಿಯ ಸ್ಫೋಟಕ ಬ್ಯಾಟರ್ ಬ್ರೀಟ್ಝ್ಕೆ ಕಳೆದ ವರ್ಷ ನಡೆದ 2025ರ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನ ವೇಳೆ ಮೂಲ ಬೆಲೆ 75 ಲಕ್ಷ ರೂ.ಗೆ ಲಕ್ನೊ ಸೂಪರ್ ಜಯಂಟ್ಸ್‌ನೊಂದಿಗೆ ಸಹಿ ಹಾಕಿದ್ದರು.
ಬಲಗೈ ಬ್ಯಾಟರ್ ಈ ತನಕ 10 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ದ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು.
► ಏಕದಿನ ಕ್ರಿಕೆಟಿನ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರು
ಮ್ಯಾಥ್ಯೂ ಬ್ರೀಟ್ಝ್ಕೆ (ದಕ್ಷಿಣ ಆಫ್ರಿಕಾ)- ನ್ಯೂಝಿಲ್ಯಾಂಡ್ ವಿರುದ್ಧ 150 ರನ್(ಲಾಹೋರ್, 2024)
ಡೆಸ್ಮಂಡ್ ಹೇನ್ಸ್(ವೆಸ್ಟ್‌ಇಂಡೀಸ್)-ಆಸ್ಟ್ರೇಲಿಯದ ವಿರುದ್ಧ 148 ರನ್(ಸೈಂಟ್ ಜಾನ್ಸ್, 1978)
ರಹಮಾನುಲ್ಲಾ ಗುರ್ಬಾಝ್(ಅಫ್ಘಾನಿಸ್ತಾನ)-ಐರ್‌ಲ್ಯಾಂಡ್ ವಿರುದ್ಧ 127 ರನ್(ಅಬುಧಾಬಿ, 2021)
ಮಾರ್ಕ್ ಚಾಪ್ಮನ್(ನ್ಯೂಝಿಲ್ಯಾಂಡ್)-ಯುಎಇ ವಿರುದ್ಧ ಔಟಾಗದೆ 124 ರನ್(ದುಬೈ, 2015)
ಕಾಲಿನ್ ಇನ್‌ಗ್ರಾಮ್(ದಕ್ಷಿಣ ಆಫ್ರಿಕಾ)-ಝಿಂಬಾಬ್ವೆ ವಿರುದ್ಧ 124 ರನ್(ಬ್ಲೋಮ್‌ಫಾಂಟೈನ್, 2010)