ಪುರುಷರ ಡಬಲ್ಸ್ ಪಂದ್ಯ | ಶ್ರೀರಾಮ್ ಬಾಲಾಜಿ, ಯೂಕಿ ಭಾಂಬ್ರಿ ಶುಭಾರಂಭ
ಶ್ರೀರಾಮ್ ಬಾಲಾಜಿ, ಯೂಕಿ ಭಾಂಬ್ರಿ | PC : X
ನ್ಯೂಯಾರ್ಕ್: ಭಾರತದ ಡಬಲ್ಸ್ ಆಟಗಾರರಾದ ಎನ್.ಶ್ರೀರಾಮ್ ಬಾಲಾಜಿ ಹಾಗೂ ಯೂಕಿ ಭಾಂಬ್ರಿ ಅವರು ತಮ್ಮ ಜೊತೆಗಾರರೊಂದಿಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೇರುವ ಮೂಲಕ ಯು.ಎಸ್. ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಎರಡು ಗಂಟೆ, 36 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಬಾಲಾಜಿ ಅವರು ತಮ್ಮ ಅರ್ಜೆಂಟೀನದ ಜೊತೆಗಾರ ಗುಡೊ ಅಂಡ್ರೊಝಿ ಅವರೊಂದಿಗೆ ಮೊದಲ ಸೆಟ್ ಸೋಲಿನಿಂದ ಹೊರ ಬಂದು ನ್ಯೂಝಿಲ್ಯಾಂಡ್‌ನ ಮಾರ್ಕಸ್ ಡೇನಿಯಲ್ ಹಾಗೂ ಮೆಕ್ಸಿಕೊದ ಮಿಗೆಲ್ ರೆಯೆಸ್-ವರೆಲಾರನ್ನು 5-7, 6-1, 7-6(12-6) ಸೆಟ್‌ಗಳ ಅಂತರದಿಂದ ಮಣಿಸಿದರು.
ಬಾಲಾಜಿ ಅವರು ರೆಯೆಸ್-ವರೆಲಾರೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ವಿರುದ್ಧ ಕಠಿಣ ಹೋರಾಟ ನೀಡಿದ್ದರು.
ಭಾಂಬ್ರಿ ಹಾಗೂ ಅವರ ಫ್ರೆಂಚ್ ಜೊತೆಗಾರ ಅಲ್ಬಾನೊ ಒಲಿವೆಟ್ಟಿ ಲೋಕಲ್ ವೈರ್ಲ್ಡ್‌ಕಾರ್ಡ್ ಆಟಗಾರರಾದ ರಿಯಾನ್ ಸೆಗರ್ಮನ್ ಹಾಗೂ ಪ್ಯಾಟ್ರಿಕ್ ವಿರುದ್ಧ 6-3, 6-4 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ಭಾಂಬ್ರಿ ಹಾಗೂ ಒಲಿವೆಟ್ಟಿ ಮುಂದಿನ ಸುತ್ತಿನಲ್ಲಿ ಅಮೆರಿಕ-ಡಚ್ ಜೋಡಿ ಅಸ್ಟಿನ್ ಕ್ರಾಜಿಸೆಕ್ ಹಾಗೂ ಜೀನ್ ಜುಲಿಯೆನ್ ರೊಜೆರ್‌ರನ್ನು ಎದುರಿಸಲಿದ್ದಾರೆ.
ಎರಡನೇ ಶ್ರೇಯಾಂಕದ ಬೋಪಣ್ಣ ಹಾಗೂ ಎಬ್ಡೆನ್ ಗುರುವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.