ಮೆಸ್ಸಿಯ ಭಾರತ ಪ್ರವಾಸ ಹೈದರಾಬಾದ್ ಗೆ ವಿಸ್ತರಣೆ
ಮೆಸ್ಸಿ | Photo Credit : PTI
ಕೋಲ್ಕತಾ, ನ. 1: ಅರ್ಜೆಂಟೀನದ ತಾರಾ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿಯ ‘2025ರ ಸಾರ್ವಕಾಲಿಕ ಶ್ರೇಷ್ಠ ಭಾರತ ಪ್ರವಾಸ’ದ ವ್ಯಾಪ್ತಿಯನ್ನು ಹೈದರಾಬಾದ್ ಗೆ ವಿಸ್ತರಿಸಲಾಗಿದೆ. ಕೇರಳದಲ್ಲಿ ಅರ್ಜೆಂಟೀನ ಆಡಬೇಕಾಗಿದ್ದ ಸ್ನೇಹಪಂದ್ಯ ರದ್ದಾದ ಬಳಿಕ, ಮೆಸ್ಸಿಯನ್ನು ನೋಡುವ ಅವಕಾಶದಿಂದ ದಕ್ಷಿಣ ಭಾರತದ ಅಭಿಮಾನಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅವರ ಪ್ರವಾಸವನ್ನು ಹೈದರಾಬಾದ್ ಗೆ ವಿಸ್ತರಿಸಲಾಗಿದೆ.
ಅರ್ಜೇಂಟೀನವು ಕೊಚ್ಚಿಯಲ್ಲಿ ನವೆಂಬರ್ 17ರಂದು ಸ್ನೇಹ ಪಂದ್ಯವೊಂದನ್ನು ಆಡುವುದೆಂದು ಕೇರಳ ಕ್ರೀಡಾ ಸಚಿವ ವಿ. ಅಬ್ದುಲ್ ರಹಿಮಾನ್ ಘೋಷಿಸಿದ್ದರು. ಆದರೆ, ಆ ಪಂದ್ಯಕ್ಕೆ ಫಿಫಾದ ಅನುಮತಿಯನ್ನು ಪಡೆಯುವುದು ವಿಳಂಬವಾಗಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಪಂದ್ಯವನ್ನು ಫಿಫಾದ ಮುಂದಿನ ವೇಳಾಪಟ್ಟಿಯಲ್ಲಿ ಮಾರ್ಚ್ ನಲ್ಲಿ ಆಡಲಾಗುವುದು ಎಂಬುದಾಗಿ ತಿಳಿಸಲಾಗಿದೆ.
ಮೆಸ್ಸಿಯ ಪರಿಷ್ಕೃತ ಪ್ರವಾಸವು ಈಗ ಭಾರತದ ಎಲ್ಲಾ ನಾಲ್ಕು ಮೂಲೆಗಳಿಗೆ ವ್ಯಾಪಿಸಲಿದೆ- ಪೂರ್ವ (ಕೋಲ್ಕತಾ), ದಕ್ಷಿಣ (ಹೈದರಾಬಾದ್), ಪಶ್ಚಿಮ (ಮುಂಬೈ) ಮತ್ತು ಉತ್ತರ (ಹೊಸದಿಲ್ಲಿ).
‘‘ಈಗ ನಾವು ದಕ್ಷಿಣವನ್ನೂ ಒಳಗೊಳ್ಳುತ್ತೇವೆ. ಇದು ದಕ್ಷಿಣ ಭಾರತದಲ್ಲಿರುವ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳಿಗೆ ಸಂದ ಗೌರವವಾಗಿದೆ’’ ಎಂದು ಪ್ರವಾಸದ ಸಂಘಟಕ ಸತಾದ್ರು ದತ್ತ ಶನಿವಾರ ಪಿಟಿಐಗೆ ತಿಳಿಸಿದ್ದಾರೆ.