ಓವಲ್ ಟೆಸ್ಟ್ ನ ಹೀರೋ ಮುಹಮ್ಮದ್ ಸಿರಾಜ್ ಗೆ ಗೂಗಲ್ ಗೌರವ
ಮುಹಮ್ಮದ್ ಸಿರಾಜ್ | PC : PTI
ಲಂಡನ್: ನಿನ್ನೆ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೆ ಹಾಗೂ ಅಂತಿಮ ಪಂದ್ಯದ ಎರಡನೆ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲನ್ನು ಕಬಳಿಸುವ ಮೂಲಕ, ಭಾರತ ತಂಡ ಆರು ರನ್ ಗಳ ರೋಚಕ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಭಾರತ ತಂಡದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರಿಗೆ ಗೂಗಲ್ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದೆ.
ಪಂದ್ಯ ಮುಕ್ತಾಯಗೊಂಡ ನಂತರ ಮಾತನಾಡಿದ್ದ ಮುಹಮ್ಮದ್ ಸಿರಾಜ್, “ನನ್ನ ಫೋನ್ ನಲ್ಲಿ ‘ವಿಶ್ವಾಸ’ ಎಂಬ ವಾಲ್ ಪೇಪರ್ ಒಂದಿದೆ ಹಾಗೂ ನಾನು ಯಾವಾಗಲೂ ನನ್ನ ಬಗ್ಗೆ ವಿಶ್ವಾಸ ಹೊಂದಿದ್ದೇನೆ. ನಾನು ಸರಿಯಾದ ಸ್ಥಳಗಳಲ್ಲಿ ಬೌಲ್ ಮಾಡುವುದರತ್ತ ಮಾತ್ರ ನನ್ನ ಗಮನ ಕೇಂದ್ರೀಕರಿಸಿದ್ದೆ. ನಾನು ಬೌಂಡರಿ ನೀಡುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಯೋಜನೆಗೆ ಅಂಟಿಕೊಂಡು, ವಿಕೆಟ್ ಪಡೆಯಬೇಕು ಎಂದು ಮಾತ್ರ ನಾನು ಬಯಸಿದ್ದೆ” ಎಂದು ಹೇಳಿದ್ದರು.
ಮುಂದುವರಿದು, “ನಾನು ಜಸ್ಸಿ ಅಣ್ಣನಲ್ಲಿ ಮಾತ್ರ ವಿಶ್ವಾಸ ಹೊಂದಿದ್ದೇನೆ” ಎಂದು 2024ರ ಟಿ-20 ವಿಶ್ವ ಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಜಸ್ಪ್ರೀತ್ ಬುಮ್ರಾರನ್ನು ಉಲ್ಲೇಖಿಸಿ ಮುಹಮ್ಮದ್ ಸಿರಾಜ್ ಹೇಳಿದ್ದರು. ಈ ಹೇಳಿಕೆಯೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹೇಳಿಕೆಯ ಜಾಡನ್ನೇ ಹಿಡಿದು ಗೂಗಲ್ ಅವರಿಗೆ ಗೌರವ ಸಲ್ಲಿಸಿದೆ.
ಗೂಗಲ್ ಸರ್ಚ್ ನಲ್ಲಿ “I only believe in S” ಎಂದು ಟೈಪ್ ಮಾಡಿದರೆ, ಅದರ ಮೇಲ್ಭಾಗದಲ್ಲಿ ‘ಸಿರಾಜ್ ಭಾಯಿ’ ಎಂಬ ಸಲಹೆ ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಪಂದ್ಯ ಮುಕ್ತಾಯಗೊಂಡ ಬಳಿಕ ಮುಹಮ್ಮದ್ ಸಿರಾಜ್ ನೀಡಿದ್ದ ಹೇಳಿಕೆಯ ಸಾಲನ್ನೇ ಬಳಸಿಕೊಂಡು ಗೂಗಲ್ ಅವರಿಗೆ ಗೌರವ ನೀಡಿರುವ ಬಗೆಯಿದು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗೂಗಲ್, “ಟೀಮ್ ಇಂಡಿಯಾಗೆ ಅಭಿನಂದನೆಗಳು” ಎಂದು ಅಭಿನಂದನೆಗಳನ್ನು ಸಲ್ಲಿಸಿದೆ. ಇದರೊಂದಿಗೆ, ಗೂಗಲ್ ಸರ್ಚ್ ನ ಮೇಲ್ಭಾಗದಲ್ಲಿ I only believe in S ಎಂದು ಟೈಪ್ ಮಾಡಿದರೆ, ಮರೆಮಾಚಿದ ರೀತಿಯಲ್ಲಿ ಸಿರಾಜ್ ಭಾಯಿ ಎಂದು ಕಾಣಿಸಿಕೊಳ್ಳುವ ಸಲಹೆ ನೀಡಿದೆ.
ಇದಕ್ಕೂ ಮುನ್ನ, ಮುಹಮ್ಮದ್ ಸಿರಾಜ್ ಅವರು ಗೂಗಲ್ ನಿಂದ ‘ವಿಶ್ವಾ ಸ’ ಎಂಬ ಪದವನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿರುವ ಚಿತ್ರವನ್ನೂ ಗೂಗಲ್ ಹಂಚಿಕೊಂಡಿತ್ತು. “ಇಲ್ಲಿ ಗೂಗಲ್ ಸರ್ಚರ್ ಗಳಿದ್ದಾರೆ ಹಾಗೂ ಅವರು ಇವರಾಗಿದ್ದಾರೆ” ಎಂದು ಆ ಚಿತ್ರದೊಂದಿಗೆ ಟ್ವೀಟ್ ಕೂಡಾ ಮಾಡಿತ್ತು.