ಮುಹಮ್ಮದ್ ಸಿರಾಜ್ ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ
ಮುಹಮ್ಮದ್ ಸಿರಾಜ್ | PC : PTI
ಹೊಸದಿಲ್ಲಿ, ಸೆ.15: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಐರ್‌ಲ್ಯಾಂಡ್ ಆಟಗಾರ್ತಿ ಓರ್ಲಾ ಪ್ರೆಂಡರ್‌ಗ್ಯಾಸ್ಟ್ ಕೂಡ ಆಗಸ್ಟ್ ತಿಂಗಳ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.
ದ ಓವಲ್ ನಲ್ಲಿ ನಡೆದ ಟೆಸ್ಟ್ ಸರಣಿಯ ಕೊನೆಯ ದಿನದಾಟದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸಿರಾಜ್ ಅವರು ಭಾರತ ತಂಡವು ಇಂಗ್ಲೆಂಡ್ ತಂಡದ ವಿರುದ್ಧ 6 ರನ್‌ನಿಂದ ರೋಚಕ ಗೆಲುವು ದಾಖಲಿಸುವಲ್ಲಿ ನೆರವಾಗಿದ್ದರು.
5ನೇ ಟೆಸ್ಟ್ ನ ಕೊನೆಯ ದಿನದಾಟದ ಬೆಳಗ್ಗಿನ ಅವಧಿಯಲ್ಲಿ ಸಿರಾಜ್ ಮೂರು ನಿರ್ಣಾಯಕ ವಿಕೆಟ್ ಗಳನ್ನು ಪಡೆದಿದ್ದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದು, ಭಾರತ ತಂಡವು ಸರಣಿಯನ್ನು 2-2ರಿಂದ ಸಮಬಲಗೊಳಿಸುವಲ್ಲಿ ನೆರವಾಗಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ವೀರೋಚಿತ ಪ್ರದರ್ಶನ ನೀಡಿದ್ದರೂ ಈಗ ನಡೆಯುತ್ತಿರುವ ಏಶ್ಯ ಕಪ್ ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
‘‘ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ನನಗೆ ವಿಶೇಷ ಗೌರವ. ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯು ಸ್ಮರಣೀಯ ಸರಣಿಯಾಗಿದೆ. ನಾನು ಭಾಗವಹಿಸಿರುವ ಅತ್ಯಂತ ಪೈಪೋಟಿಯಿಂದ ಕೂಡಿದ ಸ್ಪರ್ಧೆ ಇದಾಗಿತ್ತು. ನಿರ್ಣಾಯಕ ಹಂತದಲ್ಲಿ ಕೆಲವು ಪ್ರಮುಖ ಸ್ಪೆಲ್‌ಗಳ ಕೊಡುಗೆ ನೀಡಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಅಗ್ರ ಬ್ಯಾಟಿಂಗ್ ಸರದಿಯ ವಿರುದ್ಧ ಅವರ ಸ್ವದೇಶಿ ವಾತಾವರಣದಲ್ಲಿ ಬೌಲಿಂಗ್ ಮಾಡುವುದು ಸವಾಲಿನ ವಿಷಯವಾಗಿತ್ತು’’ ಎಂದು ಸಿರಾಜ್ ಹೇಳಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಐರ್‌ಲ್ಯಾಂಡ್ ನ ಆಲ್‌ರೌಂಡರ್ ಓರ್ಲಾ ಪ್ರೆಂಡರ್‌ಗ್ಯಾಸ್ಟ್ ಪ್ರಶಸ್ತಿ ಜಯಿಸಿದರು. ಓರ್ಲಾ ಅವರು ಪಾಕಿಸ್ತಾನ ತಂಡದ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟಿ-20 ಸರಣಿಯಲ್ಲಿ ಸರಣಿಶ್ರೇಷ್ಠ ಗೌರವ ಪಡೆದಿದ್ದರು. ಸರಣಿಯಲ್ಲಿ 144 ರನ್ ಹಾಗೂ 4 ವಿಕೆಟ್‌ಗಳನ್ನು ಉರುಳಿಸಿದ್ದರು.
ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್‌ನಲ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಓರ್ಲಾ 244 ರನ್ ಗಳಿಸಿದ್ದಲ್ಲದೆ, 7 ವಿಕೆಟ್‌ಗಳನ್ನು ಕಬಳಿಸಿದ್ದರು.