×
Ad

ಸಚಿನ್ ತೆಂಡುಲ್ಕರ್ ರ 29 ವರ್ಷ ಹಳೆಯ ದಾಖಲೆ ಮುರಿದ ಮುಶೀರ್ ಖಾನ್

Update: 2024-03-12 20:06 IST

ಮುಶೀರ್ ಖಾನ್ | Photo: PTI 

ಮುಂಬೈ: ಮುಂಬೈನ ಉದಯೋನ್ಮುಖ ಕ್ರಿಕೆಟಿಗ ಮುಶೀರ್ ಖಾನ್ ವಿದರ್ಭ ವಿರುದ್ಧ ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ನಲ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ನಿರ್ಮಿಸಿರುವ ದಾಖಲೆಯನ್ನು ಮುರಿದು ಹೊಸ ಇತಿಹಾಸ ರಚಿಸಿದ್ದಾರೆ.

ಭಾರತದ ಕ್ರಿಕೆಟಿಗ ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರ 19ರ ಹರೆಯದ ಮುಶೀರ್ ತನ್ನ ಅಮೋಘ ಕೌಶಲ್ಯವನ್ನು ಪ್ರದರ್ಶಿಸಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಂಬೈನ ಎರಡನೇ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದರು.

ಈ ಮೈಲಿಗಲ್ಲನ್ನು ತಲುಪಿರುವ ಮುಶೀರ್ ರಣಜಿ ಫೈನಲ್ ನಲ್ಲಿ ಈ ಸಾಧನೆ ಮಾಡಿದ ಮುಂಬೈನ ಕಿರಿಯ ವಯಸ್ಸಿನ ಬ್ಯಾಟರ್ ಎನಿಸಿಕೊಂಡರು. ತೆಂಡುಲ್ಕರ್ ತನ್ನ 21ನೇ ವಯಸ್ಸಿನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ತೆಂಡುಲ್ಕರ್ 1994-95ರ ರಣಜಿ ಫೈನಲ್ ನಲ್ಲಿ ಪಂಜಾಬ್ ವಿರುದ್ಧ 140 ರನ್ ಗಳಿಸಿದ್ದರು. ಮುಶೀರ್ ಖಾನ್ ಈ ಐತಿಹಾಸಿಕ ಶತಕ ಗಳಿಸುವ ಮೊದಲು ಸುಮಾರು 3 ದಶಕಗಳ ಕಾಲ ಈ ದಾಖಲೆ ತೆಂಡುಲ್ಕರ್ ಹೆಸರಲ್ಲಿತ್ತು. ಗಮನಾರ್ಹ ಸಂಗತಿಯೆಂದರೆ ಈ ಎರಡು ಶತಕಗಳು ವಾಂಖೆಡೆ ಸ್ಟೇಡಿಯಮ್ನಲ್ಲಿ ದಾಖಲಾಗಿವೆ.

ವಿದರ್ಭ ಕ್ರಿಕೆಟ್ ತಂಡದ ಬಲಿಷ್ಠ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮುಶೀರ್ ತನ್ನ ವಯಸ್ಸಿಗೂ ಮೀರಿ ಪ್ರಬುದ್ಧತೆ ಮೆರೆದರು. 255 ಎಸೆತಗಳಲ್ಲಿ ಮೂರಂಕೆಯನ್ನು ದಾಟುವ ತನಕ ತಾಳ್ಮೆಯಿಂದ ರನ್ ಕಲೆ ಹಾಕಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಮುಶೀರ್ 326 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 136 ರನ್ ಗಳಿಸಿ ಹರ್ಷ್ ದುಬೆ (5-144)ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.

ಮುಶೀರ್ ಶತಕದ ಸಂಭ್ರಮದಲ್ಲಿದ್ದಾಗ ತೆಂಡುಲ್ಕರ್ ವಾಂಖೆಡೆ ಸ್ಟೇಡಿಯಮ್ನಲ್ಲಿ ಉಪಸ್ಥಿತರಿದ್ದು ಮೂರನೇ ದಿನದಾಟವನ್ನು ವೀಕ್ಷಿಸಿದರು.

ರಣಜಿ ಟ್ರೋಫಿ ಫೈನಲ್ ನಲ್ಲಿ ತನ್ನ ವೀರೋಚಿತ ಪ್ರದರ್ಶನ ನೀಡುವ ಮೊದಲು ಮುಶೀರ್ ಈ ವರ್ಷಾರಂಭದಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಕ್ರಿಕೆಟ್ ವಲಯದಲ್ಲಿ ಅಲೆ ಎಬ್ಬಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಮೆಂಟ್ ನಲ್ಲಿ  ಒಟ್ಟು 360 ರನ್ ಕಲೆ ಹಾಕಿದ್ದರು. ಭಾರತೀಯ ಕ್ರಿಕೆಟ್ ನ ಓರ್ವ ಉಜ್ವಲ ಪ್ರತಿಭೆಯಾಗುವ ಭರವಸೆ ಮೂಡಿಸಿದ್ದರು.

ಬರೋಡಾ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲೂ ತನ್ನ ಬ್ಯಾಟಿಂಗ್ ಪರಾಕ್ರಮ ತೋರ್ಪಡಿಸಿದ ಮುಶೀರ್ ಮೊದಲಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ನಂತರ ಈ ಶತಕವನ್ನು ದ್ವಿಶತಕವಾಗಿ(357 ಎಸೆತ, 203 ರನ್)ಪರಿವರ್ತಿಸಿದರು.

ಮುಶೀರ್ ಅವರ ಹಿರಿಯ ಸಹೋದರ ಸರ್ಫರಾಝ್ ಖಾನ್ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಂಚುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ ಖಾನ್ ಸಹೋದರರು ಭಾರತೀಯ ಕ್ರಿಕೆಟ್ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಸರ್ಫರಾಝ್ ಯಶಸ್ಸಿನ ಜೊತೆಗೆ ಮುಶೀರ್ ಖಾನ್ ರ ದಿಢೀರ್ ಬೆಳವಣಿಗೆಯು ಮುಂಬೈನ ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News