ಪುರುಷರ ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ ಇದೇ ಮೊದಲು ಮೂರು ಸೂಪರ್ ಓವರ್; ನೇಪಾಳದ ವಿರುದ್ಧ ನೆದರ್‌ಲ್ಯಾಂಡ್ಸ್ ಜಯಭೇರಿ
pc : x
ಗ್ಲಾಸ್ಗೊ: ಸ್ಕಾಟ್‌ಲ್ಯಾಂಡ್ ಟಿ-20 ತ್ರಿಕೋನ ಸರಣಿಯಲ್ಲಿ ನೆದರ್‌ಲ್ಯಾಂಡ್ಸ್ ಹಾಗೂ ನೇಪಾಳ ನಡುವಿನ ಪಂದ್ಯದ ವಿಜೇತರನ್ನು ನಿರ್ಧರಿಸಲು ಒಂದಲ್ಲ, ಎರಡಲ್ಲ, ಮೂರು ಸೂಪರ್ ಓವರ್‌ಗಳನ್ನು ಆಡಲಾಯಿತು. ಟಿ-20 ಇಲ್ಲವೇ ಲಿಸ್ಟ್ ಎ ನಲ್ಲಿ ಪುರುಷರ ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಫಲಿತಾಂಶ ನಿರ್ಧರಿಸಲು ಮೂರನೇ ಸೂಪರ್ ಓವರ್ ಮೊರೆ ಹೋಗಲಾಗಿದೆ. ಅಂತಿಮವಾಗಿ ನೆದರ್‌ಲ್ಯಾಂಡ್ಸ್ ತಂಡ ಜಯಭೇರಿ ಬಾರಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೆದರ್‌ಲ್ಯಾಂಡ್ಸ್ ತಂಡವು ತೇಜಾ(35 ರನ್, 37 ಎಸೆತ), ವಿಕ್ರಮ್‌ಜೀತ್ ಸಿಂಗ್(30 ರನ್, 29 ಎಸೆತ) ಹಾಗೂ ಸಾಕಿಬ್ ಝುಲ್ಫಿಕರ್(ಔಟಾಗದೆ 25, 12 ಎಸೆತ)ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿದೆ.
ಗೆಲ್ಲಲು 153 ರನ್ ಗುರಿ ಬೆನ್ನಟ್ಟಿದ ನೇಪಾಳ ತಂಡವು ನಾಯಕ ರೋಹಿತ್ ಪೌಡೆಲ್(48 ರನ್, 35 ಎಸೆತ), ಕುಶಾಲ್ ಭುರ್ಟೆಲ್(34 ರನ್, 23 ಎಸೆತ)ಹಾಗೂ ನಂದನ್ ಯಾದವ್(ಔಟಾಗದೆ 12, 4 ಎಸೆತ) ಸಹಾಯದಿಂದ 8 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿ ಸ್ಕೋರನ್ನು ಟೈಗೊಳಿಸಿತು. ನಾಯಕ ರೋಹಿತ್ ನೇಪಾಳದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿ 19ನೇ ಓವರ್‌ನಲ್ಲಿ ವಿಕ್ರಮ್‌ಜೀತ್ ಸಿಂಗ್‌ಗೆ (2-30)ವಿಕೆಟ್ ಒಪ್ಪಿಸಿದರು.
ನೇಪಾಳ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್ ಅಗತ್ಯವಿತ್ತು. ಕ್ರೀಸ್ ನಲ್ಲಿದ್ದ ಯಾದವ್ 3ನೇ ಹಾಗೂ ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿ ನೇಪಾಳ ತಂಡ 15 ರನ್ ಕಲೆ ಹಾಕಿ ಸ್ಕೋರನ್ನು ಸಮಬಲಗೊಳಿಸಲು ನೆರವಾದರು. ಆಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಅಳವಡಿಸಲಾಯಿತು.
ಮೊದಲ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದ ನೇಪಾಳ 1 ವಿಕೆಟ್ ನಷ್ಟಕ್ಕೆ 19 ರನ್ ಗಳಿಸಿತು. ಕುಶಾಲ್ ಭುರ್ಟೆಲ್ 18 ರನ್ ಗಳಿಸಿದರು. ಗೆಲ್ಲಲು 20 ರನ್ ಗುರಿ ಬೆನ್ನಟ್ಟಿದ ನೆದರ್‌ಲ್ಯಾಂಡ್ಸ್ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿ ಪಂದ್ಯ ಟೈಗೊಳಿಸಿತು.
2ನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್‌ಲ್ಯಾಂಡ್ಸ್ ತಂಡವು 1 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿತು. ನಾಯಕ ಸ್ಕಾಟ್ ಎಡ್ವರ್ಡ್ಸ್(9 ರನ್)ಹಾಗೂ ಮ್ಯಾಕ್ಸ್ ಒ’ಡೌಡ್(ಔಟಾಗದೆ 7)ಹೆಚ್ಚು ಮಿಂಚಲಿಲ್ಲ.
ಗೆಲ್ಲಲು 18 ರನ್ ಗುರಿ ಪಡೆದ ನೇಪಾಳ ತಂಡವು ನಾಯಕ ರೋಹಿತ್(7)ಹಾಗೂ ದೀಪೆಂದ್ರ ಸಿಂಗ್(10)ನೆರವಿನಿಂದ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿ ಪಂದ್ಯ ಟೈಗೊಳಿಸಿತು.
3ನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ನೇಪಾಳ ತಂಡ ರನ್ ಗಳಿಸುವ ಮೊದಲೇ ತಾನೆದುರಿಸಿದ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಹಾಗೂ 4ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಈ ಎರಡೂ ವಿಕೆಟ್ ಗಳನ್ನು ಪಡೆದ ನೆದರ್‌ಲ್ಯಾಂಡ್ಸ್ ಬೌಲರ್ ಜಾಕ್ ಲಯನ್-ಕ್ಯಾಚೆಟ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
ಗೆಲ್ಲಲು 1 ರನ್ ಗುರಿ ಪಡೆದ ನೆದರ್‌ಲ್ಯಾಂಡ್ಸ್ ತಂಡದ ಪರ ಮೈಕಲ್ ಲೆವಿಟ್ ಮೊದಲ ಎಸೆತವನ್ನೇ ಸಿಕ್ಸರ್ ಗೆ ಸಿಡಿಸಿದರು.
ಸಂಕ್ಷಿಪ್ತ ಸ್ಕೋರ್
ನೆದರ್‌ಲ್ಯಾಂಡ್ಸ್: 20 ಓವರ್‌ಗಳಲ್ಲಿ 152/7
(ತೇಜ 35, ವಿಕ್ರಮ್‌ಜೀತ್ ಸಿಂಗ್ 30, ಸಂದೀಪ್ 3-18, ನಂದನ್ ಯಾದವ್ 2-18)
ನೇಪಾಳ: 20 ಓವರ್‌ಗಳಲ್ಲಿ 152/8
(ರೋಹಿತ್ ಪೌಡೆಲ್ 48, ಕುಶಾಲ್ ಭುರ್ಟೆಲ್ 34, ಡೇನಿಯಲ್ ಡೊರಮ್ 3-14, ವಿಕ್ರಂಜೀತ್ ಸಿಂಗ್ 2-30)
*ಸೂಪರ್ ಓವರ್ 1
ನೇಪಾಳ: 19/1
ನೆದರ್‌ಲ್ಯಾಂಡ್ಸ್: 19/0
*ಸೂಪರ್ ಓವರ್ 2
ನೆದರ್‌ಲ್ಯಾಂಡ್ಸ್ :17/1
ನೇಪಾಳ: 17/0
*ಸೂಪರ್ ಓವರ್ 3
ನೇಪಾಳ: 0/2
ನೆದರ್‌ಲ್ಯಾಂಡ್ಸ್: 6/0