ಹೊಸ ಐಪಿಎಲ್ ದಾಖಲೆ | ಮೊದಲ 10 ಪಂದ್ಯಗಳಲ್ಲಿ ದಾಖಲೆಯ ಟಿವಿ ವೀಕ್ಷಣೆ
ಹೊಸದಿಲ್ಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಇನ್ನೊಂದು ದಾಖಲೆಯಾಗಿದೆ.
2024ರ ಆವೃತ್ತಿಯ ಐಪಿಎಲ್ ನ ಮೊದಲ 10 ಪಂದ್ಯಗಳನ್ನು 35 ಕೋಟಿ ಜನರು ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ಪಂದ್ಯಾವಳಿಯ ಅಧಿಕೃತ ಪ್ರಸಾರಕ ‘ಡಿಸ್ನಿ ಸ್ಟಾರ್’ತಿಳಿಸಿದೆ. ಇದು ಈ ಹಿಂದಿನ ಯಾವುದೇ ಆವೃತ್ತಿಯ ಐಪಿಎಲ್ ನ ವೀಕ್ಷಕರ ಸಂಖ್ಯೆಗಿಂತ ಹೆಚ್ಚಾಗಿದೆ.
ಅದೂ ಅಲ್ಲದೆ, ಐಪಿಎಲ್ ಪಂದ್ಯಗಳ ಒಟ್ಟು ವೀಕ್ಷಣಾ ಅವಧಿಯು ಈ ಬಾರಿ 8028 ಕೋಟಿ ನಿಮಿಷಗಳಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 20 ಶೇಕಡದಷ್ಟು ಹೆಚ್ಚಾಗಿದೆ.
‘‘ಟಾಟಾ ಐಪಿಎಲ್ 2024ರ ದಾಖಲೆಯ ಟಿವಿ ವೀಕ್ಷಕರ ಸಂಖ್ಯೆಯಿಂದ ನಮ್ಮ ಹೃದಯ ತುಂಬಿ ಬಂದಿದೆ. ಅಭಿಮಾನಿಗಳನ್ನು ಸಂತುಷ್ಟಗೊಳಿಸುವ ತನ್ನ ಕೆಲಸವನ್ನು ಡಿಸ್ನಿ ಸ್ಟಾರ್ ಕಳೆದ ವರ್ಷ ನಿಲ್ಲಿಸಿದಲ್ಲಿಂದ ಮುಂದುವರಿಸಿದೆ’’ ಎಂದು ಡಿಸ್ನಿ ಸ್ಟಾರ್ (ಸ್ಪೋರ್ಟ್ಸ್)ನ ಮುಖ್ಯಸ್ಥ ಸಂಜೋಗ್ ಗುಪ್ತ ಅವರು ಪತ್ರಿಕಾ ಪ್ರಕಟನೆಯೊಂದರಲ್ಲಿ ಹೇಳಿದ್ದಾರೆ.
ಡಿಸ್ನಿ ಸ್ಟಾರ್ 10 ಭಾಷೆಗಳಲ್ಲಿ 14 ಫೀಡ್ ಗಳನ್ನು ಒದಗಿಸುತ್ತಿದೆ. ವಿಶೇಷವಾಗಿ, ಕಿವುಡರು, ಶ್ರವಣ ದೋಷ ಇರುವವರು ಮತ್ತು ದೃಷ್ಟಿ ದೋಷ ಇರುವ ಅಭಿಮಾನಿಗಳಿಗಾಗಿ ಅದು ಭಾರತೀಯ ಕೈ ಭಾಷೆಯಲ್ಲಿ ವಿಶೇಷ ಫೀಡ್ ಒದಗಿಸುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮಾರ್ಚ್ 22ರಂದು ನಡೆದ ಹಾಲಿ ಋತುವಿನ ಆರಂಭಿಕ ಪಂದ್ಯವನ್ನು ಬರೋಬ್ಬರಿ 16.8 ಕೋಟಿ ಮಂದಿ ವೀಕ್ಷಿಸಿದ್ದಾರೆ.
ಅದೂ ಅಲ್ಲದೆ, ಆ ದಿನದ ವೀಕ್ಷಣಾ ಅವಧಿ ಅಭೂತಪೂರ್ವ 1276 ಕೋಟಿ ನಿಮಿಷಗಳಾಗಿದ್ದವು. ಇದು ಯಾವುದೇ ಐಪಿಎಲ್ ಋತವಿನ ಆರಂಭಿಕ ದಿನದ ವೀಕ್ಷಣಾ ಅವಧಿಯ ದಾಖಲೆಯಾಗಿದೆ.