×
Ad

ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ

Update: 2025-06-24 11:28 IST

ದಿಲೀಪ್ ದೋಶಿ (Photo credit: X/BCCI)

ಲಂಡನ್: ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ಸ್ಪಿನ್ನರ್ ದಿಲೀಪ್ ದೋಶಿ ಹೃದಯಾಘಾತದಿಂದ ಸೋಮವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. 1979ರಿಂದ 1983ರ ಅವಧಿಯಲ್ಲಿ ಅವರು 33 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನು ಭಾರತದ ಪರ ಆಡಿದ್ದರು.

ಪ್ರಥಮದರ್ಜೆ ಕ್ರಿಕೆಟ್‍ನಲ್ಲಿ ಸೌರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದ ದಿಲೀಪ್ ದೋಶಿ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪೂಜ್ಯ, ವಿಶಿಷ್ಟ ಮತ್ತು ಪ್ರಮುಖ ಆಟಗಾರರಾಗಿದ್ದರು. ಅವರು ಸ್ವರ್ಗದ ಪ್ರಯಾಣಕ್ಕಾಗಿ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ಕ್ರೀಡಾಸ್ಫೂರ್ತಿ, ಬದ್ಧತೆ ಮತ್ತು ಸರ್ವಶ್ರೇಷ್ಠತೆಯ ಸಮೃದ್ಧ ಪರಂಪರೆಯನ್ನು ಅವರು ಬಿಟ್ಟುಹೋಗಿದ್ದಾರೆ. ಆ ಕಾಲಘಟ್ಟದ ದಂತಕಥೆ ಎನಿಸಿದ ಈ ಅಪೂರ್ವ ಕ್ರೀಡಾಪಟು ಅರ ಅಸಾಧಾರಣ ಕೌಶಲ ಮತ್ತು ಕ್ರೀಡೆಯ ಬಗೆಗಿನ ಬದ್ಧತೆಯಿಂದ ಸದಾ ಸ್ಮರಣೀಯರಾಗಿ ಉಳಿಯುತ್ತಾರೆ ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸಂತಾಪ ಸೂಚಿಸಿದೆ.

ದೋಶಿ ಇತ್ತೀಚೆಗೆ ನಡೆದ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಲಾಡ್ರ್ಸ್ ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಹಾಜರಾಗಿದ್ದರು.

ದೋಶಿ ವಿಶಿಷ್ಟ ಎಡಗೈ ಲೆಗ್ ಸ್ಪಿನ್ನರ್ ಎಂದೇ ಕ್ರಿಕೆಟ್ ಜಗತ್ತಿನಲ್ಲಿ ಪರಿಚಿತರು. ಭಾರತ ತಂಡಕ್ಕೆ ತಡವಾಗಿ ಪದಾರ್ಪಣೆ ಮಾಡಿದರೂ, ಹಲವು ಮೈಲುಗಲ್ಲುಗಳನ್ನು ಸಾಧಿಸಿದ ಅವರು, ಮ್ಯಾಚ್ ವಿನ್ನರ್ ಎನಿಸಿದ್ದರು. ಕೇವಲ 28 ಟೆಸ್ಟ್ ಗಳಲ್ಲೇ 100 ವಿಕೆಟ್ ಗಳಿಸಿದ ಅವರು, ಒಟ್ಟು ತಾನಾಡಿದ 33 ಟೆಸ್ಟ್ ಗಳಲ್ಲಿ 114 ವಿಕೆಟ್ ಕಬಳಿಸಿದ್ದರು. ಆರು ಬಾರಿ ಐದು ವಿಕೆಟ್ ಗೊಂಚಲು ಸಾಧಿಸಿದ್ದರು. 238 ಪ್ರಥಮದರ್ಜೆ ಪಂದ್ಯಗಳನ್ನು ಆಡಿರುವ ಅವರು 898 ವಿಕೆಟ್ ಗಳಿಸಿದ್ದರು. 43 ಬಾರಿ ಐದು ವಿಕೆಟ್ ಹಾಗೂ ಆರು ಬಾರಿ 10 ವಿಕೆಟ್ ಗೊಂಚಲು ಸಂಪಾದಿಸಿದ್ದರು. ಏಕದಿನ ಪಂದ್ಯಗಳಲ್ಲಿ 22 ವಿಕೆಟ್ ಕಿತ್ತ ಅವರು ಎರಡು ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದರು.

ಬಿಸಿಸಿಐ ಕೂಡಾ ದೋಶಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ. "ದೋಶಿ ನಿಧನದಿಂದ ಅತೀವ ದುಃಖವಾಗಿದ್ದು, ನನಗೆ ವೈಯಕ್ತಿಕ ನಷ್ಟ" ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News