ನಾಟಿಂಗ್ ಹ್ಯಾಮ್ ಓಪನ್: ಅಮೆರಿಕದ ಕೆಸ್ಲರ್ ಗೆ ಪ್ರಶಸ್ತಿ
ಕೆಸ್ಲರ್ | PC : X \ @Beeorlicious
ಲಂಡನ್: ಮಳೆ ಬಾಧಿತ ನಾಟಿಂಗ್ ಹ್ಯಾಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಮೆಕ್ಕರ್ಟ್ನಿ ಕೆಸ್ಲರ್ ಉಕ್ರೇನ್ ನ ಡಯಾನಾ ಯಾಸ್ಟ್ರೆಂಸ್ಕಾರನ್ನು 6-4, 7-5 ನೇರ ಸೆಟ್ಗಳ ಅಂತರದಿಂದ ಮಣಿಸುವ ಮೂಲಕ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ ತನ್ನ ವೃತ್ತಿಜೀವನದಲ್ಲಿ ಮೂರನೇ ಪ್ರಶಸ್ತಿ ಗೆದ್ದುಕೊಂಡರು.
ಈ ತಿಂಗಳು ಹುಲ್ಲುಹಾಸಿನ ಅಂಗಣದಲ್ಲಿ ಟೂರ್ ಮಟ್ಟದಲ್ಲಿ ತನ್ನ ಮೊದಲ ಪಂದ್ಯವನ್ನು ಜಯಿಸಿದ್ದ ಕೆಸ್ಲರ್, ಒಂದು ಗಂಟೆ ಹಾಗೂ 34 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು.
‘‘ಮತ್ತೊಂದು ಪ್ರಶಸ್ತಿ ಗೆದ್ದಿರುವುದಕ್ಕೆ ತುಂಬಾ ರೋಮಾಂಚನಗೊಂಡಿರುವೆ. ನನ್ನ ಪಾಲಿಗೆ ಇದು ಮತ್ತೊಂದು ಶ್ರೇಷ್ಠ ವಾರವಾಗಿದೆ. ಉತ್ತಮ ಹೋರಾಟ ನೀಡಿರುವ ಡಯಾನಾಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಆಕೆ ನಿಜವಾಗಿಯೂ ಕಠಿಣ ಸ್ಪರ್ಧಿ. ನಾವು ನಿಜವಾಗಿಯೂ ಮೂರು ಸ್ಪರ್ಧಾತ್ಮಕ ಪಂದ್ಯಗಳನ್ನು ಆಡಿದ್ದು, ಡಯಾನರ ಸಾಧನೆ ಶ್ಲಾಘನೀಯ’’ ಎಂದು ಕೆಸ್ಲರ್ ಹೇಳಿದರು.
ಡಯಾನಾ ಅವರು 17 ವರ್ಷಗಳ ನಂತರ ಡಬ್ಲ್ಯುಟಿಎ ಟೂರ್ ನಲ್ಲಿ ಫೈನಲ್ ಗೆ ತಲುಪಿದ ಉಕ್ರೇನ್ ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ವರ್ಷ ಎರಡನೇ ಬಾರಿ ಫೈನಲ್ ಗೆ ತಲುಪಿದ್ದ ಡಯಾನಾ ಅವರು 2019ರ ನಂತರ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು.