ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡಕ್ಕೆ ಡಬ್ಲ್ಯುಸಿಎಲ್ ಪ್ರಶಸ್ತಿ
Photo : x@ShahzainSpeakin
ಬರ್ಮಿಂಗ್ಹ್ಯಾಮ್, ಆ.3: ಎಬಿ ಡಿ ವಿಲಿಯರ್ಸ್ ಅವರ ಭರ್ಜರಿ ಶತಕ(ಔಟಾಗದೆ 120 ರನ್, 60 ಎಸೆತ, 12 ಬೌಂಡರಿ, 7 ಸಿಕ್ಸರ್)ಹಾಗೂ ಜೆ.ಪಿ. ಡುಮಿನಿ ಅರ್ಧಶತಕದ(ಔಟಾಗದೆ 50 ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್)ಕೊಡುಗೆಯ ನೆರವಿನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವು ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಲೆಜೆಂಡ್ ಗಳ ವಿಶ್ವ ಚಾಂಪಿಯನ್ ಶಿಪ್(ಡಬ್ಲ್ಯುಸಿಎಲ್) ಫೈನಲ್ ನಲ್ಲಿ 9 ವಿಕೆಟ್ ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಡಬ್ಲ್ಯುಸಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
ಸ್ನಾಯು ಸೆಳೆತವನ್ನು ಲೆಕ್ಕಿಸದೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ 41ರ ಹರೆಯದ ಡಿವಿಲಿಯರ್ಸ್ ಕೇವಲ 60 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ಗಳ ಸಹಿತ ಔಟಾಗದೆ 120 ರನ್ ಗಳಿಸಿದರು. ಕೇವಲ 47 ಎಸೆತಗಳಲ್ಲಿ ಶತಕವನ್ನು ಪೂರೈಸಿ ಮಿಂಚಿದರು.
ಜೆ.ಪಿ. ಡುಮಿನಿ(ಔಟಾಗದೆ 50)ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಇನ್ನೂ 19 ಎಸೆತಗಳು ಬಾಕಿ ಇರುವಾಗಲೇ 196 ರನ್ ಗುರಿಯನ್ನು ಚೇಸ್ ಮಾಡಿತು. ಈ ಮೂಲಕ ಪಂದ್ಯಾವಳಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿತು.
ಇದು ಡಿ ವಿಲಿಯರ್ಸ್ ಡಬ್ಲ್ಯುಸಿಎಲ್ ಪಂದ್ಯಾವಳಿಯಲ್ಲಿ ಗಳಿಸಿದ 3ನೇ ಶತಕವಾಗಿದೆ. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇಂಡಿಯಾ ಚಾಂಪಿಯನ್ಸ್ ತಂಡವು ಸೆಮಿ ಫೈನಲ್ ನಿಂದ ಹಿಂದೆ ಸರಿದಿರುವುದು ಟೂರ್ನಿಯಲ್ಲಾದ ಪ್ರಮುಖ ಹಿನ್ನಡೆಯಾಗಿದ್ದರೂ ಮಾಜಿ ಸ್ಟಾರ್ ಸುರೇಶ್ ರೈನಾ ಎಕ್ಸ್ ನಲ್ಲಿ ತನ್ನ ಭಾವನೆ ವ್ಯಕ್ತಪಡಿಸಿದ್ದಾರೆ.
‘‘ಫೈನಲ್ ನಲ್ಲಿ ಎಬಿಡಿವಿಲಿಯರ್ಸ್ ಗಳಿಸಿದ ಶತಕ ಅಮೋಘವಾಗಿತ್ತು. ನಾವು ಪಾಕಿಸ್ತಾನ ತಂಡದ ವಿರುದ್ದ ಆಡಿದ್ದರೂ ಇದೇ ರೀತಿ ಅವರನ್ನು ಸೋಲಿಸುತ್ತಿದ್ದೆವು. ನಮಗೆ ಎಲ್ಲಕ್ಕಿಂತಲೂ ದೇಶ ಮುಖ್ಯ’’ ಎಂದು ಎಕ್ಸ್ ನಲ್ಲಿ ರೈನಾ ಬರೆದಿದ್ದಾರೆ.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 195 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಶಾರ್ಜೀಲ್ ಖಾನ್(76 ರನ್, 44 ಎಸೆತ)ಪಾಕಿಸ್ತಾನ ತಂಡವು 195 ರನ್ ಗಳಿಸಲು ದೊಡ್ಡ ಕೊಡುಗೆ ನೀಡಿದರು. ಉಮರ್ ಅಮಿನ್ ಔಟಾಗದೆ 36 ರನ್(19 ಎಸೆತ)ಕಲೆ ಹಾಕಿದರು.
Winning celebration by SOUTH AFRICA CHAMPIONS. #WCL25 pic.twitter.com/nghPeMD767
— Zayn (@ShahzainSpeakin) August 2, 2025