ಮುಂಬೈ ತಂಡ ತೊರೆದು ಮಹಾರಾಷ್ಟ್ರ ತಂಡ ಸೇರಿದ ಪೃಥ್ವಿ ಶಾ
ಪೃಥ್ವಿ ಶಾ | PC : X \ @Surendra21286
ಮುಂಬೈ: ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ)ಪಡೆದಿರುವ ಪೃಥ್ವಿ ಶಾ ಅವರು ಮುಂಬರುವ 2025-26ರ ದೇಶೀಯ ಋತುವಿನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ.
ಮುಂಬರುವ ದೇಶೀಯ ಋತುವಿನಲ್ಲಿ ಬೇರೊಂದು ಕ್ರಿಕೆಟ್ ಸಂಸ್ಥೆಯಡಿ ವೃತ್ತಿಪರ ಕ್ರಿಕೆಟ್ ಆಡುವ ಉತ್ತಮ ಅವಕಾಶವೊಂದು ಲಭಿಸಿದೆ ಎಂದು ಶಾ ಈ ಹಿಂದೆ ಬಹಿರಂಗಪಡಿಸಿದ್ದು, ಇದೀಗ ಮಹಾರಾಷ್ಟ್ರ ತಂಡವನ್ನು ಸೇರುವುದು ದೃಢಪಟ್ಟಿದೆ.
‘‘ನನ್ನ ವೃತ್ತಿಜೀವನದ ಈ ಹಂತದಲ್ಲಿ ಮಹಾರಾಷ್ಟ್ರ ತಂಡವನ್ನು ಸೇರುವುದರಿಂದ ಕ್ರಿಕೆಟಿಗನಾಗಿ ನಾನು ಮತ್ತಷ್ಟು ಬೆಳೆಯಲು ಸಾಧ್ಯವಾಗಲಿದೆ ಎಂದು ನಂಬಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಪಡೆದಿರುವ ಬೆಂಬಲಕ್ಕೆ ನಾನು ಋಣಿಯಾಗಿರುವೆ. ಇತ್ತೀಚೆಗಿನ ವರ್ಷಗಳಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ರಾಜ್ಯದಾದ್ಯಂತ ಕ್ರಿಕೆಟ್ ಮೂಲಭೂತ ಅಭಿವೃದ್ದಿಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡಿದೆ’’ ಎಂದು ಶಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಮಹಾರಾಷ್ಟ್ರ ತಂಡಕ್ಕೆ ಪೃಥ್ವಿ ಶಾ ಅವರ ಪ್ರತಿಭಾವಂತ ಆಟಗಾರನನ್ನು ಸ್ವಾಗತಿಸಲು ನಮಗೆ ಖುಷಿಯಾಗುತ್ತಿದೆ. ಋತುರಾಜ್ ಗಾಯಕ್ವಾಡ್, ಅಂಕಿತ್ ಭಾವ್ನೆ, ರಾಹುಲ್ ತ್ರಿಪಾಠಿ, ಮುಕೇಶ್ ಚೌಧರಿ ಹಾಗೂ ರಜನೀಶ್ ಗುರ್ಬಾನಿ ಅವರಂತಹ ಅನುಭವಿ ಆಟಗಾರರಿರುವ ಪ್ರತಿಭಾವಂತ ತಂಡಕ್ಕೆ ಶಾ ಅವರ ಸೇರ್ಪಡೆಯಿಂದ ಮತ್ತಷ್ಟು ಶಕ್ತಿ ಬಂದಿದೆ. ಶಾ ಅವರಿಗೆ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡಿರುವ ಅನುಭವವಿದೆ. ಈ ನಿರ್ಧಾರಕ್ಕೆ ಬೆಂಬಲಿಸಿರುವ ಎಂಸಿಎ ಅಪೆಕ್ಸ್ ಕೌನ್ಸಿಲ್ ಹಾಗೂ ಕ್ರಿಕೆಟ್ ಸಲಹಾ ಸಮಿತಿಗೆ(ಸಿಎಸಿ) ನನ್ನ ಹೃತ್ಪೂರ್ವಕ ಅಭಿನಂದನೆಗಳು’’ ಎಂದು ಎಂಸಿಎ ಅಧ್ಯಕ್ಷ ರೋಹಿತ್ ಪವಾರ್ ಹೇಳಿದ್ದಾರೆ.
ಶಾ ಅವರು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ತಂಡದ ಹಾಲಿ ನಾಯಕ ಗಾಯಕ್ವಾಡ್ ಜೊತೆ ಆಡಲಿದ್ದಾರೆ. ಶಾ ಅವರು ಟೀಮ್ ಇಂಡಿಯಾವನ್ನು 5 ಟೆಸ್ಟ್, 6 ಏಕದಿನ ಹಾಗೂ ಒಂದು ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2018ರಲ್ಲಿ ಭಾರತದ ಅಂಡರ್-19 ತಂಡವು ಪುರುಷರ ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದರು. ರಾಜ್ ಕೋಟ್ ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಡಿರುವ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು.
ಶಾ ಇತ್ತೀಚೆಗಿನ ದಿನಗಳಲ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿದ್ದು, ಫಿಟ್ನೆಸ್ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿಯ ವೇಳೆ ಮುಂಬೈ ತಂಡದಿಂದ ಹೊರಗಿಡಲಾಗಿತ್ತು.
2024ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ವೇಳೆ ಮುಂಬೈ ತಂಡಕ್ಕೆ ವಾಪಸಾಗಿದ್ದ ಶಾ ಅವರು 9 ಪಂದ್ಯಗಳಲ್ಲಿ 197 ರನ್ ಗಳಿಸಿ ತನ್ನ ತಂಡದ ಯಶಸ್ಸಿಗೆ ಕೊಡುಗೆ ನೀಡಿದ್ದರು. ಆದರೆ ಅವರು ವಿಜಯ್ ಹಝಾರೆ ಟ್ರೋಫಿ ತಂಡಕ್ಕೆ ಆಯ್ಕೆಯಾಗಿರಲಿಲ್ಲ.
ಮುಂಬೈ ಪರ 32 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಶಾ 49.03ರ ಸರಾಸರಿಯಲ್ಲಿ 7 ಶತಕಗಳು ಹಾಗೂ 10 ಅರ್ಧಶತಕಗಳ ಸಹಿತ 2,648 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 29 ಪಂದ್ಯಗಳಲ್ಲಿ 10 ಶತಕ ಹಾಗೂ 4 ಅರ್ಧಶತಕಗಳ ಸಹಿತ 3,399 ರನ್ ಗಳಿಸಿದ್ದಾರೆ.