ಆಳ ಸಮುದ್ರಕ್ಕೆ ತಳ್ಳಿದರೂ ಆತ ಈಜಬಲ್ಲ: ಗಿಲ್ ನಾಯಕತ್ವ ಬಗ್ಗೆ ಗಂಭೀರ್ ಪ್ರಶಂಸೆ
Photo credit: PTI
ಹೆಡಿಂಗ್ಲೆ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭ್‍ಮನ್ ಗಿಲ್ ಅವರ ನಾಯಕತ್ವ ಸವಾಲಿನ ಆರಂಭ ಪಡೆದಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದ ಬಹುತೇಕ ಅವಧಿಯಲ್ಲಿ ಭಾರತ ಪ್ರಾಬಲ್ಯ ಮೆರೆದರೂ, ಅತಿಥೇಯರು ಐದು ವಿಕೆಟ್‍ಗಳ ಗೆಲುವು ಸಾಧಿಸಿದ್ದಾರೆ. ಆದಾಗ್ಯೂ ಮುಖ್ಯ ಕೋಚ್ ಗೌತಮ್ ಗಂಭೀರ್, ಶುಭ್‍ಮನ್ ಗಿಲ್ ಸಾಧನೆಯನ್ನು ಅದರಲ್ಲೂ ಮುಖ್ಯವಾಗಿ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದನ್ನು ಕೊಂಡಾಡಿದ್ದಾರೆ.
ನಾಲ್ಕನೇ ದಿನದವರೆಗೂ ಭಾರತ 2002ರಿಂದೀಚೆಗೆ ಹೆಡಿಂಗ್ಲೆಯಲ್ಲಿ ಮೊದಲ ಜಯ ದಾಖಲಿಸುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಭಾರತದ ಎರಡನೇ ಇನಿಂಗ್ಸ್ ನಲ್ಲಿ ಬಾಲಂಗೋಚಿಗಳ ನೀರಸ ಪ್ರದರ್ಶನ ಹಾಗೂ ಇಂಗ್ಲೆಂಡ್ ದೊಡ್ಡಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು, ಭಾರತದ ಪಾಲಿಗೆ ಮಾರಕವಾಯಿತು.
ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೇ ಕಣಕ್ಕಿಳಿದ ಭಾರತ ತಂಡದ ನಾಯಕತ್ವ ಹೊಣೆಯನ್ನು ನಿಭಾಯಿಸಿದ ಗಿಲ್, ಭಾರತದ ಅತ್ಯಂತ ಕಿರಿಯ ಕ್ಯಾಪ್ಟನ್ ಎನಿಸಿಕೊಂಡರು.
"ಮೊದಲ ಪಂದ್ಯ ಸಹಜವಾಗಿಯೇ ಹಿಂಜರಿಕೆ ಇರುತ್ತದೆ. ಇದು ದೊಡ್ಡ ಗೌರವ; ಈಗಾಗಲೇ ಆತ ಹೇಳಿದಂತೆ ಟೆಸ್ಟ್ ತಂಡದ ನಾಯಕತ್ವದ ಅವಕಾಶ ಹಲವರಿಗೆ ಸಿಗುವುದಿಲ್ಲ ಹಾಗೂ ಆತ ಅದ್ಭುತ ಆಟಗಾರ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ಇನಿಂಗ್ಸ್ ನಲ್ಲಿ ಆತನ ಬ್ಯಾಟಿಂಗ್ ಶೈಲಿಯನ್ನು ನೋಡಿ, ಆತನಿಗೆ ಖಂಡಿತವಾಗಿಯೂ ಛಾತಿ ಇದೆ ಎಂದು ಹೇಳಬಲ್ಲೆ; ಮೊದಲ ಬಾರಿಗೆ ನಾಯಕನಾಗಿ ಆತ ಶತಕ ಸಾಧಿಸಿದ" ಎಂದು ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಶ್ಲಾಘಿಸಿದರು.
"ಎಲ್ಲ ಅಂಶಗಳೂ ಆತನನ್ನು ಯಶಸ್ವಿ ನಾಯಕನಾಗಿ ರೂಪಿಸಬಲ್ಲವು. ಆತನಿಗೆ ಸಮಯಾವಕಾಶ ನೀಡಬೇಕು. ಇನ್ನೂ ಇದು ಅರಂಭಿಕ ದಿನಗಳು. ಮೊಟ್ಟಮೊದಲ ಬಾರಿ ನಾಯಕನಾಗಿ ಬ್ಯಾಟರ್ ಆಗಿ ಮಿಂಚಿದರು. ಇದು ನಾಯಕತ್ವಕ್ಕೆ ಕಠಿಣ ಜಾಗ. ಇದು ಆಳ ಸಮುದ್ರಕ್ಕೆ ಒಬ್ಬನನ್ನು ತಳ್ಳಿದಂತೆ; ಆದರೆ ಆತ ಸೂಕ್ತ ವೃತ್ತಿಪರನಾಗಿ ಹೊರಬರುತ್ತಾನೆ ಎಂಬ ವಿಶ್ವಾಸ ನನ್ನದು" ಎಂದು ಬಣ್ಣಿಸಿದರು.