ಗಿಲ್ ಕ್ರಿಸ್ಟ್ ದಾಖಲೆ ಪುಡಿಗಟ್ಟಿದ ಕ್ವಿಂಟನ್ ಡಿಕಾಕ್
PHOTO : cricketworldcup.com
ಮುಂಬೈ: ಕೇವಲ ಐದು ಇನಿಂಗ್ಸ್ ಗಳಲ್ಲಿ ತನ್ನ ಮೂರನೇ ಶತಕವನ್ನು ಸಿಡಿಸಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಕ್ವಿಂಟನ್ ಡಿಕಾಕ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ತನ್ನ ಶ್ರೇಷ್ಠ ಫಾರ್ಮನ್ನು ಮುಂದುವರಿಸಿದ್ದಾರೆ.
ವಿಕೆಟ್ಕೀಪರ್-ಬ್ಯಾಟರ್ ಡಿಕಾಕ್ 174 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ನಷ್ಟಕ್ಕೆ 382 ರನ್ ಗಳಿಸಲು ನೆರವಾದರು.
ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ವಿಕೆಟ್ ಕೀಪರ್ ಎನಿಸಿಕೊಂಡ ಡಿಕಾಕ್ ಆಸ್ಟ್ರೇಲಿಯದ ಆಡಮ್ ಗಿಲ್ ಕ್ರಿಸ್ಟ್ ದಾಖಲೆಯನ್ನು ಪುಡಿಗಟ್ಟಿದರು. ಗಿಲ್ ಕ್ರಿಸ್ಟ್ 2007ರ ಆವೃತ್ತಿಯ ವಿಶ್ವಕಪ್ ಫೈನಲ್ ನಲ್ಲಿ ಶ್ರೀಲಂಕಾದ ವಿರುದ್ಧ 149 ರನ್ ಗಳಿಸಿದ್ದರು.
140 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟರ್ 15 ಬೌಂಡರಿ ಹಾಗೂ 7 ಸಿಕ್ಸರ್ಗಳನ್ನು ಸಿಡಿಸಿದರು. ಒಂದೇ ವಿಶ್ವಕಪ್ ನಲ್ಲಿ ಮೂರು ಶತಕಗಳನ್ನು ಗಳಿಸಿರುವ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.
ಡಿಕಾಕ್ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ ವಿರುದ್ಧ ದಕ್ಷಿಣ ಆಫ್ರಿಕಾ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 100 ಹಾಗೂ 109 ರನ್ ಗಳಿಸಿದ್ದಾರೆ.
ಡಿಕಾಕ್ ತನ್ನ 150ನೇ ಏಕದಿನ ಪಂದ್ಯದಲ್ಲಿ 20ನೇ ಶತಕವನ್ನು ಗಳಿಸಿದರು. 178 ರನ್ ಗೆ ವಿಕೆಟ್ ಒಪ್ಪಿಸಿದ ಡಿಕಾಕ್ ವಿಶ್ವಕಪ್ ಇತಿಹಾಸದಲ್ಲಿ ದ್ವಿಶತಕ ಗಳಿಸಿದ ಮೂರನೇ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗುವ ಅವಕಾಶದಿಂದ ವಂಚಿತರಾದರು.
ಡಿಕಾಕ್ ಅವರು ಪ್ರಸಕ್ತ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು. ೩೦ರ ಹರೆಯದ ಡಿಕಾಕ್ ಈಗಿನ ವಿಶ್ವಕಪ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿ ಆಸ್ಟ್ರೇಲಿಯದ ಡೇವಿಡ್ ವಾರ್ನರ್(163)ದಾಖಲೆಯನ್ನು ಮುರಿದರು.
ಡಿಕಾಕ್ 12000ಕ್ಕೂ ಅಧಿಕ ರನ್ ಗಳಿಸಿದ ದಕ್ಷಿಣ ಆಫ್ರಿಕಾದ 7ನೇ ಬ್ಯಾಟರ್ ಆಗಿದ್ದಾರೆ. ಇದೀಗ ಅವರು 284 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ 12160 ರನ್ ಗಳಿಸಿದ್ದಾರೆ.