×
Ad

ಪ್ಲೇ ಆಫ್ ಪಂದ್ಯ: ಆರ್‌ ಸಿ ಬಿ ಗೆ ಹೇಝಲ್‌ ವುಡ್ ಮರು ಸೇರ್ಪಡೆ

Update: 2025-05-23 21:06 IST

ಜೋಶ್ ಹೇಝಲ್‌ ವುಡ್ | PC : X 

ಬೆಂಗಳೂರು: ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ ವುಡ್ ಭುಜನೋವಿನಿಂದ ಚೇತರಿಸಿಕೊಂಡ ನಂತರ ಐಪಿಎಲ್ ಪ್ಲೇ ಆಫ್ ಪಂದ್ಯವನ್ನಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮರು ಸೇರ್ಪಡೆಯಾಗುವ ನಿರೀಕ್ಷೆ ಇದೆ.

34ರ ಹರೆಯದ ಹೇಝಲ್‌ ವುಡ್ ಎಪ್ರಿಲ್ 27ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಬಾರಿ ಆಡಿದ್ದರು. ಭಾರತ-ಪಾಕಿಸ್ತಾನದ ನಡುವೆ ಮಿಲಿಟರಿಉದ್ವಿಗ್ನತೆ ನೆಲೆಸಿದ್ದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದಾಗ ಸ್ವದೇಶಕ್ಕೆ ತೆರಳಿದ್ದ ಹೇಝಲ್‌ ವುಡ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಬ್ರಿಸ್ಬೇನ್‌ ನಲ್ಲಿ ಅಭ್ಯಾಸ ನಿರತರಾಗಿದ್ದರು.

ಕ್ರಿಕೆಟ್ ಆಸ್ಟ್ರೇಲಿಯದ ವೈದ್ಯಕೀಯ ತಂಡವು ಸದ್ಯ ಹೇಝಲ್‌ ವುಡ್ ಗಾಯದ ಸಮಸ್ಯೆಯ ಮೇಲೆ ನಿಗಾವಹಿಸಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಂಡಿದೆ.

ಹೇಝಲ್‌ ವುಡ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ 29ರಂದು ಆರಂಭವಾಗಲಿರುವ ನಾಕೌಟ್ ಹಂತಕ್ಕಿಂತ ಮೊದಲು ಆರ್‌ಸಿಬಿ ತಂಡವನ್ನು ಮರು ಸೇರ್ಪಡೆಯಾಗುವ ಸಾಧ್ಯತೆಯಿದೆ. ಆರ್‌ಸಿಬಿ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿದ್ದು, 2016ರ ನಂತರ ಮೊದಲ ಬಾರಿ ಲೀಗ್ ಹಂತದಲ್ಲಿ ಅಗ್ರ-2 ಸ್ಥಾನಗಳನ್ನು ಪಡೆಯುವ ಗುರಿ ಇಟ್ಟುಕೊಂಡಿದೆ.

ಐಪಿಎಲ್ ಪುನರಾರಂಭವಾದ ನಂತರ ಆರ್‌ಸಿಬಿ ಬೆಂಗಳೂರಿನಲ್ಲಿ ಆಡಬೇಕಾಗಿದ್ದ ಪಂದ್ಯವೊಂದು ಒಂದೂ ಎಸೆತ ಕಾಣದೆ ರದ್ದಾಗಿದೆ. ಮೇ 23 ಹಾಗೂ ಮೇ 27ರಂದು ಸನ್‌ ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಇನ್ನೆರಡು ಲೀಗ್ ಪಂದ್ಯಗಳನ್ನು ಆಡಲು ಬಾಕಿ ಇದೆ. ಹೈದರಾಬಾದ್ ಹಾಗೂ ಲಕ್ನೊ ತಂಡಗಳು ಪ್ಲೇ ಆಫ್ ವಿಶ್ವಾಸವನ್ನು ಈಗಾಗಲೇ ಕಳೆದುಕೊಂಡಿವೆ.

ಈ ಋತುವಿನಲ್ಲಿ ಆರ್‌ಸಿಬಿ ತಂಡದ ಯಶಸ್ಸಿನಲ್ಲಿ ಹೇಝಲ್‌ ವುಡ್ ನಿರ್ಣಾಯಕ ಪಾತ್ರವಹಿಸಿದ್ದು, 8.44ರ ಇಕಾನಮಿ ರೇಟ್‌ನಲ್ಲಿ 17ರ ಸರಾಸರಿಯಲ್ಲಿ ಒಟ್ಟು 19 ವಿಕೆಟ್‌ಗಳನ್ನು ಪಡೆದು ಬೌಲಿಂಗ್ ದಾಳಿಯ ನೇತೃತ್ವವಹಿಸಿದ್ದಾರೆ.

ಹೇಝಲ್‌ ವುಡ್ ವಾಪಸಾತಿಯಿಂದ ಪ್ಲೇ ಆಫ್ ಪಂದ್ಯಗಳಿಗಿಂತ ಮೊದಲು ಆರ್‌ಸಿಬಿಯ ಬೌಲಿಂಗ್ ಸರದಿಯು ಮತ್ತಷ್ಟು ಬಲಿಷ್ಠವಾಗಲಿದೆ. ಗುಜರಾತ್ ಟೈಟಾನ್ಸ್ ತಂಡವು ಗುರುವಾರ ಲಕ್ನೊ ವಿರುದ್ಧ ಆಘಾತಕಾರಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡವು ಅಗ್ರ-2ರಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News