×
Ad

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ RCB

"ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನಷ್ಟೇ ಅಲ್ಲ...ನಮ್ಮ ಕುಟುಂಬ ಸದಸ್ಯರನ್ನು"

Update: 2025-08-30 12:28 IST

ಬೆಂಗಳೂರು: ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ವರ್ಷಗಳಿಂದ ಪ್ರಶಸ್ತಿ ವಂಚಿತವಾಗಿದ್ದ RCB ತಂಡ, 2025ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಜೂನ್ 3ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಗಳ ಅಂತರದಿಂದ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಹೀಗಾಗಿ, ವಿಶ್ವದಾದ್ಯಂತ RCB ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮರುದಿನ (ಜೂನ್ 4ರಂದು) ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದ RCB, ಇದೀಗ ಮೃತರ ಕುಟುಂಬಗಳಿಗೆ ಅದೇ RCB CARES ಮೂಲಕ ತಲಾ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ RCB, "ಜೂನ್ 4, 2025- ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನಷ್ಟೇ ಅಲ್ಲ...ನಮ್ಮ ಕುಟುಂಬ ಸದಸ್ಯರನ್ನು. ಅವರು ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅವರ (ಮೃತ ಅಭಿಮಾನಿಗಳು) ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿ ಭರವಸೆ" ಎಂದು ಹೇಳಿದೆ.

RCB ಮೂರು ತಿಂಗಳಿನಿಂದ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಪೋಸ್ಟ್ ಅನ್ನು ಹಂಚಿಕೊಂಡಿರಲಿಲ್ಲ. ಆದರೆ, ಶುಕ್ರವಾರ ಅಭಿಮಾನಿಗಳನ್ನುದ್ದೇಶಿಸಿ ಪೋಸ್ಟ್ ಮಾಡಿದ್ದ RCB, ಕಳೆದ ಮೂರು ತಿಂಗಳಿನಿಂದ ನಮ್ಮನ್ನು ಖಾಲಿತನ ಮಾತ್ರವಲ್ಲ ಆಳವಾದ ದುಃಖವೂ ಆವರಿಸಿದೆ ಎಂದು ಹೇಳಿತ್ತು.

ಇದಕ್ಕೂ ಮುನ್ನ, ರಾಜ್ಯ ಸರಕಾರವೂ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News