×
Ad

ಅಜೇಯ ದಾಖಲೆಯೊಂದಿಗೆ ಪ್ಲೇ ಆಫ್ ತಲುಪುವತ್ತ ಆರ್‌ಸಿಬಿ ಚಿತ್ತ

Update: 2025-05-08 20:25 IST

PC : PTI

ಲಕ್ನೊ: ಆತಿಥೇಯ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಎಕಾನ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ 59ನೇ ಐಪಿಎಲ್ ಪಂದ್ಯದಲ್ಲಿ ಎದುರಿಸಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರು ಮೈದಾನದ ಹೊರಗಿನ ಅಜೇಯ ದಾಖಲೆಯನ್ನು ಉಳಿಸಿಕೊಳ್ಳುವ ಜೊತೆಗೆ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವತ್ತ ಚಿತ್ತಹರಿಸಿದೆ.

ಆರ್‌ಸಿಬಿ ತಂಡವು ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರಿನಿಂದ ಹೊರಗೆ ಆಡಿರುವ ಎಲ್ಲ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಸದ್ಯ 11 ಪಂದ್ಯಗಳಲ್ಲಿ 16 ಅಂಕ ಕಲೆ ಹಾಕಿರುವ ಆರ್‌ಸಿಬಿ ಅಗ್ರ-4ರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಲಕ್ನೊ ಪಂದ್ಯದ ನಂತರ ತವರು ಮೈದಾನದಲ್ಲಿ ಕೊನೆಯ ಎರಡು ಪಂದ್ಯಗಳನ್ನು ಆಡಲಿರುವ ರಜತ್ ಪಾಟಿದಾರ್ ಬಳಗವು ಉಳಿದಿರುವ 3 ಪಂದ್ಯಗಳನ್ನು ಜಯಿಸಿದರೆ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಬಹುದು. ಸದ್ಯ ಆರ್‌ಸಿಬಿ ಸತತ 4 ಪಂದ್ಯಗಳನ್ನು ಜಯಿಸಿ ಭರ್ಜರಿ ಫಾರ್ಮ್‌ನಲ್ಲಿದೆ.

ಮಂಡಿರಜ್ಜು ಗಾಯದಿಂದ ಬಳಲುತ್ತಿರುವ 3ನೇ ಕ್ರಮಾಂಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಅನುಪಸ್ಥಿತಿಯು ಆರ್‌ಸಿಬಿಗೆ ಹಿನ್ನಡೆಯುಂಟು ಮಾಡಿದೆ. ಅನಾರೋಗ್ಯದ ಕಾರಣ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಕೊನೆಯ 2 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಪ್ರಮುಖ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಭುಜನೋವಿನಿಂದಾಗಿ ಚೆನ್ನೈ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ವಿರಾಟ್ ಕೊಹ್ಲಿ ಅವರ ಫಾರ್ಮ್, ಯುವ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಮನರಂಜನೀಯ ಇನಿಂಗ್ಸ್ ಹಾಗೂ ಉತ್ತಮ ಬೌಲಿಂಗ್ ದಾಳಿಯು ಆರ್‌ಸಿಬಿಯನ್ನು ಶಕ್ತಿಶಾಲಿಯಾಗಿಸಿದೆ. ಕಳೆದ ಶನಿವಾರ ಸಿಎಸ್‌ಕೆ ವಿರುದ್ಧ ರೊಮಾರಿಯೊ ಶೆಫರ್ಡ್ ಅವರ ಅಬ್ಬರದ ಬ್ಯಾಟಿಂಗ್ ಎದುರಾಳಿಗಳ ಎದೆ ನಡುಗಿಸಿದೆ.

ರಿಷಭ್ ಪಂತ್ ನೇತೃತ್ವದ ಲಕ್ನೊ ತಂಡದ ಪಾಲಿಗೆ ಇದು ಮಾಡು-ಮಡಿ ಪಂದ್ಯವಾಗಿದೆ. 11 ಪಂದ್ಯಗಳಲ್ಲಿ ಕೇವಲ 10 ಅಂಕ ಗಳಿಸಿರುವ ಪಂತ್ ಬಳಗವು ಸತತ 3 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ.

ಮಧ್ಯಮ ಸರದಿಯಲ್ಲಿ ಆಯುಷ್ ಬದೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಿಕೊಲಸ್ ಪೂರನ್ ಹಾಗೂ ನಾಯಕ ಪಂತ್ ಅವರ ಕಳಪೆ ಫಾರ್ಮ್ ಲಕ್ನೊಗೆ ಹೊಡೆತ ನೀಡಿದೆ.

ಲಕ್ನೊ ತಂಡದ ಬೌಲಿಂಗ್ ಪಡೆ ಕೂಡ ದುರ್ಬಲವಾಗಿದೆ. ಡೆಲ್ಲಿ ತಂಡವು 159 ರನ್ ಗುರಿಯನ್ನು 8 ಎಸೆತ ಇರುವಾಗಲೇ ಚೇಸ್ ಮಾಡಿದರೆ, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕ್ರಮವಾಗಿ 215 ಹಾಗೂ 236 ರನ್ ಗಳಿಸಿದ್ದವು. ಇನ್ನೊಂದು ಪಂದ್ಯದಲ್ಲಿ ಎಡವಿದರೆ ಲಕ್ನೊ ತಂಡವು ಟೂರ್ನಿಯಿಂದ ನಿರ್ಗಮಿಸುವುದು ಖಚಿತವಾಗಲಿದೆ.

►ಲಕ್ನೊದ ಎಕಾನ ಕ್ರೀಡಾಂಗಣದ ಐಪಿಎಲ್ ದಾಖಲೆ, ಅಂಕಿ-ಅಂಶ

ಆಡಿರುವ ಪಂದ್ಯಗಳು: 19

ಮೊದಲು ಬ್ಯಾಟಿಂಗ್ ಮಾಡಿರುವ ತಂಡಗಳಿಗೆ ಗೆಲುವು: 8

ಎರಡನೇ ಬ್ಯಾಟಿಂಗ್ ಮಾಡಿರುವ ತಂಡಗಳಿಗೆ ಗೆಲುವು: 10

ಫಲಿತಾಂಶರಹಿತ: 01

ಮೊದಲ ಇನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್: 168

ತಂಡವೊಂದರ ಗರಿಷ್ಠ ಮೊತ್ತ: 235

ಯಶಸ್ವಿಯಾಗಿ ಚೇಸ್ ಮಾಡಿದ ಗರಿಷ್ಠ ಮೊತ್ತ: 197

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News