ಆರ್‌ಸಿಬಿ ಫ್ರಾಂಚೈಸಿ ಮಾರಾಟಕ್ಕಿದೆ!
ಮಾರ್ಚ್ 2026ರೊಳಗೆ ಹೊಸ ಮಾಲೀಕರ ಸಾಧ್ಯತೆ; ಶೇರು ಮಾರುಕಟ್ಟೆಗೆ ಅಧಿಕೃತ ಮಾಹಿತಿ
Photo: BCCI
ಬೆಂಗಳೂರು, ನ.5: ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಮಾರಾಟಕ್ಕೆ ಸಿದ್ಧವಾಗಿದೆ. ತಂಡದ ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಕಂಪೆನಿಯು ಅಧಿಕೃತವಾಗಿ ಮಾರಾಟ ಪ್ರಕ್ರಿಯೆ ಆರಂಭಿಸಿರುವುದಾಗಿ ಬುಧವಾರ ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‌ಇ) ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪೆನಿಯ ಪ್ರಕಾರ, ಈ ಪ್ರಕ್ರಿಯೆ 2026ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಡಿಯಾಜಿಯೊ ತನ್ನ ಭಾರತೀಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಆರ್‌ಸಿಬಿ ತಂಡವನ್ನು ಹೊಂದಿದೆ.
USL ಪ್ರಕಟಣೆಯಲ್ಲಿ ಹೇಳಿರುವಂತೆ, “ಕಂಪೆನಿ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ನಲ್ಲಿನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆ ಪ್ರಾರಂಭಿಸಿದೆ.” RCSPL ಕಂಪೆನಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯೋಜಿಸುವ ಐಪಿಎಲ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ಸ್ಪರ್ಧೆಗಳಲ್ಲಿ ಭಾಗವಹಿಸುವ ಆರ್‌ಸಿಬಿ ತಂಡದ ಮಾಲೀಕತ್ವ ಹೊಂದಿದೆ.
“ಆರ್‌ಸಿಬಿ ನಮಗೆ ಅಮೂಲ್ಯವಾದ ಮತ್ತು ಕಾರ್ಯತಂತ್ರದ ಆಸ್ತಿಯಾಗಿದೆ. ಆದರೆ ಇದು ನಮ್ಮ ಆಲ್ಕೋಬೆವ್ ವ್ಯವಹಾರದ ಭಾಗವಲ್ಲ. RCSPL ನ ದೀರ್ಘಕಾಲೀನ ಮೌಲ್ಯವನ್ನು ಉಳಿಸಿಕೊಂಡು, ಅದರ ಎಲ್ಲಾ ಪಾಲುದಾರರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹೂಡಿಕೆ ಆಯ್ಕೆಗಳ ಪರಿಶೀಲನೆ ಮುಂದುವರಿಸುತ್ತೇವೆ,” ಎಂದು USL ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸೋಮೇಶ್ವರ್ ತಿಳಿಸಿದ್ದಾರೆ.
ಕಂಪೆನಿಯು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಯಮ 30ರ ಅಡಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಕಟನೆಯಲ್ಲಿ ಮಾರಾಟ ಅಥವಾ ಹೂಡಿಕೆ ಪುನರ್‌ವ್ಯವಸ್ಥೆ ಪ್ರಕ್ರಿಯೆ 2026ರ ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಉಲ್ಲೇಖಿಸಲಾಗಿದೆ.
ಆರ್‌ಸಿಬಿ ಖರೀದಿಸಲು ಆಸಕ್ತಿ ತೋರಿಸಿರುವವರಲ್ಲಿ ಅದಾನಿ ಗ್ರೂಪ್, JSW ಗ್ರೂಪ್ ನ ಜಿಂದಾಲ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನವಾಲಾ ಹಾಗೂ ದೇವಯಾನಿ ಇಂಟರ್‌ನ್ಯಾಷನಲ್‌ನ ರವಿ ಜೈಪುರಿಯಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಜೂನ್ 4ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಮೃತಪಟ್ಟ ಬಳಿಕ ಆರ್‌ಸಿಬಿ ಮಾರಾಟದ ಊಹಾಪೋಹಗಳು ಬಲಗೊಂಡಿದ್ದವು. ಕಂಪೆನಿಯು ತನ್ನ ಪ್ರಮುಖವಲ್ಲದ ಹೂಡಿಕೆಗಳಿಂದ ಹೊರಬರುವ ಕಾರ್ಯತಂತ್ರದ ಭಾಗವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.