×
Ad

"ಅಭಿಮಾನಿಗಳೊಂದಿಗಿದ್ದೇವೆ": ಕಾಲ್ತುಳಿತ ಘಟನೆ ಸಂಭವಿಸಿ 3 ತಿಂಗಳ ನಂತರ RCB ಪೋಸ್ಟ್

Update: 2025-08-28 16:06 IST

File Photo: PTI

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಘಟನೆ ನಂತರ, ಇದೇ ಪ್ರಥಮ ಬಾರಿಗೆ ಹಾಲಿ ಐಪಿಎಲ್ ಚಾಂಪಿಯನ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಮೂರು ತಿಂಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದೆ.

ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್‌ಸಿಬಿ, ‘RCB Cares’ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದು, ಸದಾ ಅಭಿಮಾನಿಗಳೊಂದಿಗಿರುವುದಾಗಿ ಅಭಯ ನೀಡಿದೆ.

“ನಾವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳು ಕಳೆದಿವೆ. ಹಾಗಂತ ಇದು ನಮ್ಮ ಗೈರಲ್ಲ; ಬದಲಿಗೆ ಆಳವಾದ ದುಃಖದ ಮೌನವಾಗಿತ್ತು” ಎಂದು ಸಮಜಾಯಿಷಿ ನೀಡಿದೆ.

“ಈ ಮಾಧ್ಯಮದ ಮೂಲಕ ನೀವೆಲ್ಲ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ, ಜೂನ್ 4ರಂದು ನಡೆದ ಘಟನೆ ಎಲ್ಲವನ್ನೂ ಬದಲಿಸಿತು. ಆ ದಿನದ ದುರಂತದ ನಂತರ, ಕೇವಲ ನಿಶ್ಯಬ್ದ ಆವರಿಸಿತ್ತು. ಆದರದು ಕೇವಲ ಮೌನವಲ್ಲ; ಅದು ಶ್ರದ್ಧೆಯಿಂದ ತುಂಬಿದ್ದ ಶಾಂತ ಶ್ರದ್ಧಾಂಜಲಿಯಾಗಿತ್ತು. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ, ಹಲವು ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯನ್ನಾಗಿ, ನಂಬಿಕೆಯನ್ನಾಗಿ ರೂಪಿಸಿಕೊಳ್ಳಬೇಕೆಂದು ತೀರ್ಮಾನಿಸಿದೆವು. ಅದರ ಫಲವೇ ‘RCB Cares’” ಎಂದು ಅದು ಪೋಸ್ಟ್ ನಲ್ಲಿ ಹೇಳಿದೆ.

“ಇದು ನಮ್ಮ ಅಭಿಮಾನಿಗಳು ಹಾಗೂ ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆಯಾಗಿದೆ. ಇಂದು ನಾವು ಮರಳಿದ್ದೇವೆ, ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ‘ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ, RCB Cares’. ನಾವು ಸದಾ ನಿಮ್ಮೊಂದಿಗಿದ್ದೇವೆ” ಎಂದು ಅದು ಅಭಯ ನೀಡಿದೆ.

ಇನ್ನೂ ಹೆಚ್ಚಿನ ಮಾಹಿತಿಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದೂ ಅದು ತನ್ನ ಪೋಸ್ಟ್ ನಲ್ಲಿ ಪ್ರಕಟಿಸಿದೆ.

RCB ತಂಡ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದ ಖುಷಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಆ ಬಳಿಕ, ಮೃತರ ಕುಟುಂಬಗಳಿಗೆ RCB ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News