ಮಹಿಳೆಯರ ಪ್ರೀಮಿಯರ್ ಲೀಗ್ ಸಮಿತಿ ಅಧ್ಯಕ್ಷರಾಗಿ ರೋಜರ್ ಬಿನ್ನಿ ನೇಮಕ
Credit PTI Photo
ಹೊಸದಿಲ್ಲಿ: ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಬೆಳವಣಿಗೆಗೆ ಒತ್ತು ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ)ತನ್ನ ಅಧ್ಯಕ್ಷ ರೋಜರ್ ಬಿನ್ನಿ ನೇತೃತ್ವದಲ್ಲಿ ಎಂಟು ಸದಸ್ಯರ ಸಮಿತಿಯನ್ನು ಗುರುವಾರ ರಚಿಸಿದೆ.
ಬಿನ್ನಿ ಸಮಿತಿಯ ಅಧ್ಯಕ್ಷರಾಗಿದ್ದರೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಸಮಿತಿಯಲ್ಲಿರುವ ಇತರ ಸದಸ್ಯರುಗಳೆಂದರೆ: ಅರುಣ್ ಧುಮಾಲ್(ಐಪಿಎಲ್ ಅಧ್ಯಕ್ಷ),ರಾಜೀವ್ ಶುಕ್ಲಾ(ಬಿಸಿಸಿಐ ಉಪಾಧ್ಯಕ್ಷ), ಆಶೀಶ್ ಶೆಲಾರ್(ಬಿಸಿಸಿಐ ಖಜಾಂಚಿ), ದೇವಜಿತ್ ಸೈಕಿಯ(ಬಿಸಿಸಿಐ ಜೊತೆ ಕಾರ್ಯದರ್ಶಿ), ಮಧುಮತಿ ಲೇಲೆ ಹಾಗೂ ಪ್ರಭ್‌ತೇಜ್ ಭಾಟಿಯಾ.
ಡಬ್ಲ್ಯುಪಿಎಲ್‌ನಲ್ಲಿ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಮಿತಿಯು ಹೂಡಿಕೆದಾರರು, ಆಟಗಾರರು ಹಾಗೂ ಅಭಿಮಾನಿಗಳೊಂದಿಗೆ ಸಹಕರಿಸಲಿದ್ದಾರೆ.
2024ರ ಡಬ್ಲ್ಯುಪಿಎಲ್‌ಗಾಗಿ ಹರಾಜು ಪ್ರಕ್ರಿಯೆಯು ಮುಂಬೈನಲ್ಲಿ ಡಿ.9ರಂದು ನಡೆಯಲಿದೆ. ಎರಡನೇ ಆವೃತ್ತಿಯ ಲೀಗ್‌ನ ದಿನಾಂಕ ಹಾಗೂ ಸ್ಥಳಗಳನ್ನು ಶೀಘ್ರವೇ ಪ್ರಕಟಿಸುವ ಸಾಧ್ಯತೆಯಿದೆ.