ನಿಂಗ್ಬೊ ಓಪನ್ ಟೆನಿಸ್ ಟೂರ್ನಿ : ಎಲೆನಾ ರೈಬಾಕಿನಾ ಚಾಂಪಿಯನ್
Photo: PTI
ನಿಂಗ್ಬೊ(ಚೀನಾ),ಅ.18: ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೋವಾರನ್ನು 3-6, 6-0, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಕಝಕ್‌ಸ್ತಾನದ ಆಟಗಾರ್ತಿ ಎಲೆನಾ ರೈಬಾಕಿನಾ ನಿಂಗ್ಬೊ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಈ ಮೂಲಕ ಈ ವರ್ಷದ ಡಬ್ಲ್ಯುಟಿಎ ಫೈನಲ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ವೃತ್ತಿಜೀವನದಲ್ಲಿ 10ನೇ ಪ್ರಶಸ್ತಿಯನ್ನು ಜಯಿಸಿರುವ ರೈಬಾಕಿನಾ ಈ ವಾರ ಟೋಕಿಯೊದಲ್ಲಿ ಪಾನ್ ಪೆಸಿಫಿಕ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದರೆ ರಶ್ಯದ ಯುವ ಆಟಗಾರ್ತಿ ಮಿರ್ರಾ ಆಂಡ್ರೀವಾರನ್ನು ಹಿಂದಿಕ್ಕಿ ಡಬ್ಲ್ಯುಟಿಎ ಫೈನಲ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.
ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ನ.1ರಿಂದ 8ರ ತನಕ ನಡೆಯಲಿರುವ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಆರ್ಯನಾ ಸಬಲೆಂಕಾ, ಇಗಾ ಸ್ವಿಯಾಟೆಕ್, ಕೊಕೊ ಗೌಫ್, ಅಮಂಡಾ ಅನಿಸಿಮೋವಾ, ಜೆಸ್ಸಿಕಾ ಪೆಗುಲಾ, ಮ್ಯಾಡಿಸನ್ ಕೀಸ್ ಹಾಗೂ ಜಾಸ್ಮಿನ್ ಪಯೋಲಿನಿ ಈಗಾಗಲೆ ಅರ್ಹತೆ ಪಡೆದಿದ್ದಾರೆ.
ವಿಶ್ವದ ನಂ.9ನೇ ಆಟಗಾರ್ತಿ ರೈಬಾಕಿನಾ ಈ ವರ್ಷ ತನ್ನ 2ನೇ ಟ್ರೋಫಿಯನ್ನು ಗೆದ್ದಿದ್ದಾರೆ.