×
Ad

ಗಾಯಾಳು ಸಯೀಮ್ ಅಯ್ಯೂಬ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಕ್ಕೆ

Update: 2025-02-07 21:57 IST

ಸಯೀಮ್ ಅಯ್ಯೂಬ್ | PC : X 

ಲಾಹೋರ್: ಪಾಕಿಸ್ತಾನದ ಯುವ ಆರಂಭಿಕ ಬ್ಯಾಟರ್ ಸಯೀಮ್ ಅಯ್ಯೂಬ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ. ಅವರು ಕಾಲಿನ ಮಣಿಗಂಟು ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು 10 ವಾರಗಳ ಅಗತ್ಯವಿದೆ.

ಜನವರಿಯಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಅವರು ಗಾಯಗೊಂಡಿದ್ದರು.

ಸಲೀಮ್‌ರ ಗಾಯದ ಪರಿಸ್ಥಿತಿಗೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ. ‘‘ಸಯೀಮ್ ಎಮ್‌ಆರ್‌ಐ ಸ್ಕ್ಯಾನ್‌ಗಳು, ಎಕ್ಸ್-ರೇ ಮತ್ತು ಇತರ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗಿದ್ದು, ಗಾಯಗೊಂಡ ದಿನದಿಂದ (ಜನವರಿ 3) 10 ವಾರಗಳ ಕಾಲ ಅವರು ಮೈದಾನದಿಂದ ಹೊರಗುಳಿಯುತ್ತಾರೆ’’ ಎಂದು ಹೇಳಿಕೆ ತಿಳಿಸಿದೆ.

‘‘ಮುಂಬರುವ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಅವರ ಲಭ್ಯತೆಯು ಎಲ್ಲಾ ದೈಹಿಕ ಕ್ಷಮತೆ ಪರೀಕ್ಷೆಗಳಲ್ಲಿ ಅವರು ತೇರ್ಗಡೆಯಾಗುವುದು ಮತ್ತು ವೈದ್ಯಕೀಯ ಸಲಹೆಗಳನ್ನು ಅವಲಂಬಿಸಿದೆ’’ ಎಂದು ಅದು ಹೇಳಿದೆ.

ಸಯೀಮ್ ಕಾಲಿನ ಮಣಿಗಂಟಿನ ಗಾಯದಿಂದ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ತನ್ನ ಚೇತರಿಕೆಯನ್ನು ಇಂಗ್ಲೆಂಡ್‌ನಲ್ಲಿ ಮುಂದುವರಿಸಲಿದ್ದಾರೆ ಎಂಬುದಾಗಿಯೂ ಕ್ರಿಕೆಟ್ ಮಂಡಳಿ ತಿಳಿಸಿದೆ.

ಪಾಕಿಸ್ತಾನವು ಮಾರ್ಚ್ 16ರಿಂದ ಎಪ್ರಿಲ್ 5ರವರೆಗೆ ನ್ಯೂಝಿಲ್ಯಾಂಡ್‌ನಲ್ಲಿ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಬಳಿಕ ಎಪ್ರಿಲ್ 8ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಗೊಳ್ಳಲಿದೆ.

ಪಾಕಿಸ್ತಾನದ ಇತ್ತೀಚಿನ ಆಸ್ಟ್ರೇಲಿಯ, ಝಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಗಳಲ್ಲಿ 22 ವರ್ಷದ ಎಡಗೈ ಬ್ಯಾಟರ್ ಸಯೀಮ್ ತಂಡದ ಗರಿಷ್ಠ ಸ್ಕೋರ್ ಗಳಿಕೆದಾರನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News