×
Ad

ದುಲೀಪ್ ಟ್ರೋಫಿ | ಗಾಯದ ಸಮಸ್ಯೆ: ಮೂರು ವಾರ ಸರ್ಫರಾಝ್ ಅಲಭ್ಯ

ಧ್ರುವ ಜುರೆಲ್ ಕೂಡ ಔಟ್

Update: 2025-08-31 21:38 IST

 ಸರ್ಫರಾಝ್ ಖಾನ್ | PC :  PTI

ಮುಂಬೈ, ಆ.31: ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬುಚಿ ಬಾಬು ಪಂದ್ಯಾವಳಿಯಲ್ಲಿ ಸತತ ಶತಕಗಳನ್ನು ಸಿಡಿಸಿದ್ದ ಮುಂಬೈ ತಂಡದ ಮಧ್ಯಮ ಸರದಿಯ ಬ್ಯಾಟರ್ ಸರ್ಫರಾಝ್ ಖಾನ್ ಅವರು ಅಕ್ಟೋಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಿಂತ ಮೊದಲು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ಸರ್ಫರಾಝ್ ಗಾಯದ ಸಮಸ್ಯೆಯ ಕಾರಣದಿಂದ ದುಲೀಪ್ ಟ್ರೋಫಿ ಟೂರ್ನಿಯ ಸೆಮಿ ಫೈನಲ್‌ನಿಂದ ಹೊರಗುಳಿದಿದ್ದಾರೆ. ಮೂರು ವಾರ ವಿಶ್ರಾಂತಿ ಪಡೆಯಲಿದ್ದಾರೆ.

ಸೆ.4ರಿಂದ ಬೆಂಗಳೂರಿನ ಬಿಸಿಸಿಐ ಮೈದಾನದಲ್ಲಿ ಆರಂಭವಾಗಲಿರುವ ಕೇಂದ್ರ ವಲಯದ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಶ್ಚಿಮ ವಲಯದ ಪರ ಸರ್ಫರಾಝ್ ಆಡಬೇಕಾಗಿತ್ತು.

‘‘ಐದು ದಿನಗಳ ಹಿಂದೆ ಬುಚಿ ಬಾಬು ಸ್ಪರ್ಧೆಯಲ್ಲಿ ಹರ್ಯಾಣದ ವಿರುದ್ಧ ಶತಕ ಗಳಿಸಿದಾಗ ಸರ್ಫರಾಝ್‌ಗೆ ಗಾಯವಾಗಿತ್ತು. ಅವರು ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ’’ ಎಂದು ಮೂಲಗಳು ರವಿವಾರ ತಿಳಿಸಿವೆ.

ಸರ್ಫರಾಝ್ ಬದಲಿಗೆ ಬರೋಡಾದ ಬ್ಯಾಟರ್ ಶಿವಾಲಿಕ್ ಶರ್ಮಾ ತಂಡವನ್ನು ಸೇರುವ ಸಾಧ್ಯತೆಯಿದೆ. ಶಿವಾಲಿಕ್ ಪಂದ್ಯಾವಳಿಯಲ್ಲಿ ಪಶ್ಚಿಮ ವಲಯ ತಂಡದ ಮೀಸಲು ಆಟಗಾರನಾಗಿದ್ದಾರೆ.

ಶಿವಾಲಿಕ್ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 43.48ರ ಸರಾಸರಿಯಲ್ಲಿ 1,087 ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ 7 ಪಂದ್ಯಗಳಲ್ಲಿ ಒಟ್ಟು 484 ರನ್ ಗಳಿಸಿದ್ದಾರೆ.

ಇತ್ತೀಚೆಗೆ ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಕಡೆಗಣಿಸಲ್ಪಟ್ಟಿದ್ದ 27ರ ಹರೆಯದ ಸರ್ಫರಾಝ್ ಅವರು ಬುಚಿ ಬಾಬು ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಟಿಎನ್‌ಸಿಎ ಇಲೆವೆನ್ ವಿರುದ್ಧ ಮುಂಬೈ ಪರ 114 ಎಸೆತಗಳಲ್ಲಿ 138 ರನ್ ಹಾಗೂ ಹರ್ಯಾಣದ ವಿರುದ್ಧ 111 ಎಸೆತಗಳಲ್ಲಿ 111 ರನ್ ಗಳಿಸಿದ್ದರು.

ಭಾರತದ ಟೆಸ್ಟ್ ವಿಕೆಟ್‌ಕೀಪರ್ ಧ್ರುವ್ ಜುರೆಲ್ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕೇಂದ್ರ ವಲಯದ ನಾಯಕನಾಗಿ ನೇಮಕಗೊಂಡಿದ್ದರು. ಆದರೆ ಗಾಯದ ಸಮಸ್ಯೆಯ ಕಾರಣಕ್ಕೆ ಈಶಾನ್ಯ ವಲಯದ ವಿರುದ್ಧ ರವಿವಾರ ಕೊನೆಗೊಂಡಿರುವ ಕ್ವಾರ್ಟರ್ ಫೈನಲ್ ಪಂದ್ಯದಿಂದ ವಂಚಿತರಾಗಿದ್ದರು.ಇದೀಗ ಸೆ.4ರಿಂದ ಪಶ್ಚಿಮ ವಲಯದ ವಿರುದ್ಧ ನಡೆಯಲಿರುವ ಸೆಮಿ ಫೈನಲ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

ಜುರೆಲ್ ಬದಲಿಗೆ ಉತ್ತರ ಪ್ರದೇಶದ ವಿಕೆಟ್‌ ಕೀಪರ್ ಉಪೇಂದ್ರ ಯಾದವ್ ಕೇಂದ್ರ ವಲಯ ತಂಡವನ್ನು ಸೇರಲಿದ್ದಾರೆ.

ದುಬೈನಲ್ಲಿ ಏಶ್ಯಕಪ್ ಆಡಲು ಸಜ್ಜಾಗಿರುವ ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಕೇಂದ್ರ ವಲಯ ತಂಡದಿಂದ ಹೊರಗುಳಿದಿದ್ದಾರೆ. ಯಾದವ್ ಬದಲಿಗೆ ವಿದರ್ಭದ ವೇಗದ ಬೌಲರ್ ಯಶ್ ಠಾಕೂರ್ ತಂಡವನ್ನು ಸೇರಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News