×
Ad

ಪ್ಯಾರಿಸ್ ಒಲಿಂಪಿಕ್ಸ್‌ ಗೆ ಶೂಟರ್‌ ಗಳಾದ ವರುಣ್ ಥೋಮರ್, ಇಶಾ ಸಿಂಗ್ ಅರ್ಹತೆ

Update: 2024-01-08 22:54 IST

ಹೊಸದಿಲ್ಲಿ: ಜಕಾರ್ತದಲ್ಲಿ ನಡೆದ ಏಶ್ಯನ್ ಕ್ವಾಲಿಫೈಯರ್ಸ್ ನಲ್ಲಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿರುವ ವರುಣ್ ಥೋಮರ್ ಹಾಗೂ ಇಶಾ ಸಿಂಗ್ ಭಾರತದ 14ನೇ ಹಾಗೂ 15ನೇ ಒಲಿಂಪಿಕ್ಸ್ ಕೋಟಾ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಕಾಂಟಿನೆಂಟಲ್ ಇವೆಂಟ್‌ ನ ಮೊದಲ ದಿನವಾದ ಸೋಮವಾರ ಭಾರತವು ಟೀಮ್ ವಿಭಾಗದಲ್ಲಿ ಚಿನ್ನ ಸೇರಿದಂತೆ ಒಟ್ಟು ಮೂರು ಚಿನ್ನದ ಪದಕಗಳನ್ನು ಜಯಿಸಿದೆ.

20ರ ಹರೆಯದ ತೋಮರ್ ಪುರುಷರ 10 ಮೀ. ಏರ್ ಪಿಸ್ತೂಲ್ ಫೈನಲ್ನಲ್ಲಿ 239.6 ಅಂಕವನ್ನು ಗಳಿಸಿ ಮೊದಲ ಸ್ಥಾನ ಪಡೆದರು. ಅರ್ಜುನ್ ಚೀಮಾ 237.3 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದುಕೊಂಡರು. ಮಂಗೋಲಿಯದ ದೇವಾಖು ಎಕ್ತಾವಾನ್(217.2)ಕಂಚಿನ ಪದಕ ಜಯಿಸಿದರು.

ಇದಕ್ಕೂ ಮೊದಲು ತೋಮರ್(586), ಅರ್ಜುನ್(579) ಹಾಗೂ ಉಜ್ವಲ್ ಮಲಿಕ್(575) ಒಟ್ಟು 1,740 ಅಂಕ ಗಳಿಸಿ 10 ಮೀ. ಏರ್ ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಇರಾನ್ ಹಾಗೂ ಕೊರಿಯಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದವು.

ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ತೋಮರ್ 2018ರ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಟೋಕಿಯೊ ಒಲಿಂಪಿಯನ್ ಸೌರಭ್ ಚೌಧರಿ ಅವರ ಸೋದರ ಸಂಬಂಧಿಯಾಗಿದ್ದಾರೆ.

ಮಹಿಳೆಯರ ಫೈನಲ್ ನಲ್ಲಿ ಇಶಾ ಸಿಂಗ್ 243.1 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಪಾಕಿಸ್ತಾನದ ತಲತ್ ಕಿಶ್ಮಾಲಾ 236.3 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದರು. ಇದೇ ವೇಳೆ ಭಾರತದ ರಿದಮ್ ಸಾಂಗ್ವಾನ್ ಕಂಚಿನ ಪದಕದಿಂದ ವಂಚಿತರಾದರು. ಸುರಭಿ ರಾವ್ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಏಶ್ಯನ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಗಾಗಿ ಒಟ್ಟು 16 ಕೋಟಾ ಸ್ಥಾನಗಳು ಲಭ್ಯವಿದೆ.

ಜಕಾರ್ತದ ಸೆನಾಯನ್ ಶೂಟಿಂಗ್ ರೇಂಜ್ನಲ್ಲಿ 256 ಪದಕಗಳನ್ನು(84 ಚಿನ್ನ, 84 ಬೆಳ್ಳಿ ಹಾಗೂ 88 ಕಂಚಿನ ಪದಕಗಳು)ಗೆಲ್ಲಲು 26 ದೇಶಗಳ 385 ಅತ್ಲೀಟ್‌ ಗಳು ಕಣದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News