ಎಕ್ಸ್ ಪೋಸ್ಟ್ ಸುಳ್ಳು ಸುದ್ದಿಗೆ ದಂಗಾದ ಸಿಧು; ವಾಸ್ತವವಾಗಿ ನಡೆದದ್ದೇನು?
PC: x.com/CrickitbyHT
ಹೊಸದಿಲ್ಲಿ: ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಬಗ್ಗೆ ಮಾಜಿ ಕ್ರಿಕೆಟ್ ತಾರೆ ನವಜ್ಯೋತ್ ಸಿಂಗ್ ಸಿಧು ನೀಡಿದ್ದರು ಎನ್ನಲಾದ ಹೇಳಿಕೆಯ ಬಗೆಗಿನ ಎಕ್ಸ್ ಪೋಸ್ಟ್ ಒಂದು ಸ್ವತಃ ಸಿಧು ಅವರನ್ನೇ ದಂಗುಬಡಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು "ಸುಳ್ಳು ಸುದ್ದಿ" ಎಂದು ಸಿಧು ದೃಢಪಡಿಸಿದ್ದಾರೆ.
ಈ ಬೆಳವಣಿಗೆ ಸಂಭವಿಸಿರುವುದು ಪರ್ತ್ ನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡ ಪಂದ್ಯದ ಬಳಿಕ. ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಭಾರತದ ಅಜೇಯ ದಾಖಲೆ ಮುರಿದಂತಾಗಿದೆ.
ಈ ಸೋಲಿನ ಬಳಿಕ ಜೋದ್ ಇನ್ಸಾನ್ ಹೆಸರಿನ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಗಂಭೀರ್ ಹಾಗೂ ಅಗರ್ಕರ್ ಅವರ ಫೋಟೊ ಪೋಸ್ಟ್ ಮಾಡಿ ಅದಕ್ಕೆ "ಭಾರತ 2027ರ ವಿಶ್ವಕಪ್ ಜಯಿಸಬೇಕಾದರೆ, ಬಿಸಿಸಿಐ ಅಜಿತ್ ಅಗರ್ಕರ್ ಹಾಗೂ ಗೌತಮ್ ಗಂಭೀರ್ ಅವರನ್ನು ತಕ್ಷಣವೇ ಕಿತ್ತೊಗೆಯಬೇಕು ಹಾಗೂ ರೋಹಿತ್ ಶರ್ಮಾ ಅವರಿಗೆ ಮತ್ತೆ ಗೌರವಯುತವಾಗಿ ನಾಯಕತ್ವ ಮರಳಿಸಬೇಕು" ಎಂಬ ಶೀರ್ಷಿಕೆ ನೀಡಿ, ಇದು ಸಿಧು ಅವರ ಹೇಳಿಕೆ ಎಂದು ಬಣ್ಣಿಸಿದ್ದರು.
ಆದರೆ ಸೋಮವಾರ 62 ವರ್ಷ ವಯಸ್ಸಿನ ಸಿಧು, ಈ ಜಾಲತಾಣ ಬಳಕೆದಾರನನ್ನು ತರಾಟೆಗೆ ತೆಗೆದುಕೊಂಡಿದ್ದು, "ನಾನೆಂದೂ ಹೀಗೆ ಹೇಳಿಲ್ಲ. ನಾನು ಸುಳ್ಳು ಸುದ್ದಿ ಹರಡುವುದಿಲ್ಲ. ಇದನ್ನು ಕಲ್ಪಿಸಿಯೂ ಇಲ್ಲ. ನಿಮಗೆ ನಾಚಿಕೆಯಾಗಬೇಕು" ಎಂದು ಪೋಸ್ಟ್ ಮಾಡಿದ್ದಾರೆ. ಸಿಧು ಅವರ ಪ್ರತಿಕ್ರಿಯೆ ಬಳಿಕ ಮೂಲಕ ಪೋಸ್ಟ್ ಕಿತ್ತುಹಾಕಲಾಗಿದೆ.
ಸರಣಿಯ ಎರಡನೇ ಪಂದ್ಯ ಅಡಿಲೇಡ್ ನಲ್ಲಿ ಈ ತಿಂಗಳ 23ರಂದು ನಡೆಯಲಿದೆ.