ಎರಡು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸಿಮೊನಾ ಹಾಲೆಪ್ ಟೆನಿಸ್ಗೆ ವಿದಾಯ
Photo - X
ವಾಶಿಂಗ್ಟನ್ ಡಿಸಿ: ಎರಡು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸಿಮೊನಾ ಹಾಲೆಪ್ ಅವರು ತಾಯ್ನಾಡು ರೊಮೇನಿಯಾದಲ್ಲಿ ಮಂಗಳವಾರ ನಡೆದಿದ್ದ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಸೋತ ನಂತರ ತನ್ನ 33ನೇ ವಯಸ್ಸಿನಲ್ಲಿ ಟೆನಿಸ್ನಿಂದ ನಿವೃತ್ತಿಯಾದರು.
‘‘ಇದು ದುಃಖವೋ ಹಾಗೂ ಸಂತೋಷದ ವಿಚಾರವೋ ನನಗೆ ಗೊತ್ತಿಲ್ಲ. ಆದರೆ ನನಗೆ ದುಃಖ ಹಾಗೂ ಸಂತೋಷ ಎರಡೂ ಆಗುತ್ತಿದೆ. ನನ್ನ ಆತ್ಮ ಈ ನಿರ್ಧಾರದಿಂದ ಶಾಂತವಾಗಿದೆ. ನನಗೆ ಈಗ ಮೊದಲಿನಂತೆ ಆಡಲು ಸಾಧ್ಯವಿಲ್ಲ, ದೇಹವು ಅದಕ್ಕೆ ಸಹಕರಿಸುತ್ತಿಲ್ಲ’’ಎಂದು ಟ್ರಾನ್ಸಿಲ್ವೇನಿಯಾ ಓಪನ್ನಲ್ಲಿ ಲೂಸಿಯಾ ಬ್ರಾಂಜ್ಟಿ ವಿರುದ್ಧ 1-6, 1-6 ಸೆಟ್ ಗಳಿಂದ ಸೋತ ನಂತರ ಹಾಲೆಪ್ ಹೇಳಿದ್ದಾರೆ.
2017ರಲ್ಲಿ ಮೊದಲ ಬಾರಿ ಡಬ್ಲ್ಯುಟಿಎ ರ‍್ಯಾಂಕಿಂಗ್ ನಲ್ಲಿ ನಂ.1 ಸ್ಥಾನ ತಲುಪಿದ್ದ ಹಾಲೆಪ್ ಈ ವರ್ಷ ಆಡಿರುವ ಮೊದಲ ಪಂದ್ಯ ಇದಾಗಿತ್ತು. ಇದೀಗ 870ನೇ ರ‍್ಯಾಂಕಿನಲ್ಲಿರುವ ಹಾಲೆಪ್, ವೈಲ್ಡ್ಕಾರ್ಡ್ ಆಹ್ವಾನದ ಮೇರೆಗೆ ರೊಮೇನಿಯಾದಲ್ಲಿ ಆಡಿದ್ದರು.
ಮೊಣಕಾಲು ಹಾಗೂ ಭುಜನೋವಿನ ಕಾರಣದಿಂದ ಕಳೆದ ತಿಂಗಳು ನ್ಯೂಝಿಲ್ಯಾಂಡ್ನ ಆಕ್ಲಂಡ್ನಲ್ಲಿ ನಡೆದಿದ್ದ ಟೂರ್ನಿಯಿಂದ ಹೊರಗುಳಿದಿದ್ದರು.
ಒಂದೊಮ್ಮೆ ಮಹಿಳೆಯರ ಟೆನಿಸ್ನ ಅಗ್ರಮಾನ್ಯ ಆಟಗಾರ್ತಿಯಾಗಿದ್ದ ಹಾಲೆಪ್ 2019ರಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ನ ಫೈನಲ್ ನಲ್ಲಿ ಸೆರೆನಾ ವಿಲಿಯಮ್ಸ್ರನ್ನು ಸೋಲಿಸಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು. 2018ರಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸ್ಲೊಯಾನ್ ಸ್ಟೆಫನ್ಸ್ರನ್ನು ಸೋಲಿಸಿ ಮತೊಂದು ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಗ್ರ್ಯಾನ್ಸ್ಲಾಮ್ ಟೂರ್ನಮೆಂಟ್ ನಲ್ಲಿ ಮೂರು ಬಾರಿ ರನ್ನರ್ಸ್ ಅಪ್ ಆಗಿದ್ದರು. 2018ರಲ್ಲಿ ಆಸ್ಟ್ರೇಲಿಯನ್ ಓಪನ್, 2014 ಹಾಗೂ 2017ರ ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ಫೈನಲ್ ನಲ್ಲಿ ಸೋತು 2ನೇ ಸ್ಥಾನ ಪಡೆದಿದ್ದರು.
2022ರ ಯು.ಎಸ್. ಓಪನ್ನಲ್ಲಿ ಕೊನೆಯ ಬಾರಿ ಪ್ರಮುಖ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಮೊದಲ ಸುತ್ತಿನಲ್ಲಿ ಉಕ್ರೇನ್ನ ಡರಿಯಾ ಸ್ನಿಗುರ್ ವಿರುದ್ಧ ನೇರ ಸೆಟ್ ಗಳಿಂದ ಸೋತು ಹೊರ ನಡೆದಿದ್ದರು. ಈ ವೇಳೆ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು.