×
Ad

ನಾಳೆ ಸ್ವಿಸ್ ಓಪನ್ ಆರಂಭ | ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿ ಸಿಂಧು, ಲಕ್ಷ್ಯ ಸೇನ್

Update: 2025-03-17 21:43 IST

ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ | PC : PTI 

ಹೊಸದಿಲ್ಲಿ: ಭಾರತದ ಸ್ಟಾರ್ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ ಮಂಗಳವಾರ ಆರಂಭವಾಗಲಿರುವ 250,000 ಡಾಲರ್ ಬಹುಮಾನ ಮೊತ್ತದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಫಾರ್ಮ್ ಕಂಡುಕೊಳ್ಳಲು ಪ್ರಯತ್ನವನ್ನು ಮುಂದುವರಿಸಲಿದ್ದಾರೆ.

ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಸದ್ಯ 7ನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಮಾಳವಿಕಾ ಬನ್ಸೋಡ್‌ರನ್ನು ಎದುರಿಸಲಿದ್ದಾರೆ.

ಲಕ್ಷ್ಯ ಸೇನ್ ಕೂಡ ತಮ್ಮದೇ ದೇಶದ, 2016ರ ಸ್ವಿಸ್ ಓಪನ್ ವಿನ್ನರ್ ಎಚ್.ಎಸ್. ಪ್ರಣಯ್ ಅವರನ್ನು ಬಿಡಬ್ಲ್ಯುಎಫ್ ಸೂಪರ್-300 ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.

2022ರ ಚಾಂಪಿಯನ್ ಸಿಂಧು, ಕಳೆದ ವಾರ ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡು ಆಲ್ ಇಂಗ್ಲೆಂಡ್ ಚಾಂಪಿಯನ್‌ ಶಿಪ್‌ನಲ್ಲಿ ಪುನರಾಗಮನ ಮಾಡಿದ್ದರೂ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಇದೇ ಟೂರ್ನಿಯಲ್ಲಿ ಮಾಳವಿಕಾ ಸಿಂಗಾಪುರದ ಯೆಯೊ ಜಿಯಾ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸ ಗಳಿಸಿದ್ದರು.

ಲಕ್ಷ್ಯ ಹಾಗೂ ಪ್ರಣಯ್ ಕಳೆದ ವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ವ್ಯತಿರಿಕ್ತ ಫಲಿತಾಂಶ ಪಡೆದಿದ್ದರು. ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರೆ, ಪ್ರಣಯ್ ಮೊದಲ ಸುತ್ತಿನಲ್ಲಿ ಎಡವಿದ್ದರು.

ಭಾರತೀಯ ಶಟ್ಲರ್‌ಗಳು ಸ್ವಿಸ್ ಓಪನ್ ಟೂರ್ನಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಸಿಂಧು, ಕೆ.ಶ್ರೀಕಾಂತ್, ಪ್ರಣಯ್, ಸಮೀರ್ ವರ್ಮಾ, ಸೈನಾ ನೆಹ್ವಾಲ್ ಹಾಗೂ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಈ ಟೂನಿಯಲ್ಲಿ ಚಾಂಪಿಯನ್‌ಗಳಾಗಿದ್ದರು.

2022ರ ಥಾಮಸ್ ಕಪ್ ವಿಜೇತ ತಂಡದ ಭಾಗವಾಗಿರುವ ಲಕ್ಷ್ಯ ಹಾಗೂ ಪ್ರಣಯ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನಂತರ ಇದೇ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ಲಕ್ಷ್ಯ, ಕಳೆದ ವಾರ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇಂಡೋನೇಶ್ಯದ ಜೋನಾಥನ್ ಕ್ರಿಸ್ಟಿ ಅವರನ್ನು ಮಣಿಸಿದ್ದರು. ಚಿಕುನ್‌ಗುನ್ಯಾದಿಂದ ಚೇತರಿಸಿಕೊಂಡು ದೀರ್ಘ ಸಮಯದ ನಂತರ ಬ್ಯಾಡ್ಮಿಂಟನ್ ಅಂಗಣಕ್ಕೆ ವಾಪಸಾಗಿರುವ ಪ್ರಣಯ್ ಮೊದಲ ಸುತ್ತಿನಲ್ಲೇ ಸೋಲುತ್ತಾ ಬಂದಿದ್ದು, ಈ ಟೂರ್ನಿಯಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಹಾಗೂ ಅನುಪಮಾ ಉಪಾಧ್ಯಾಯ ಕೂಡ ಉತ್ತಮ ಪ್ರದರ್ಶನದ ಗುರಿ ಇಟ್ಟುಕೊಂಡಿದ್ದಾರೆ.

ಆಕರ್ಷಿ ಕಶ್ಯಪ್ ಕ್ವಾಲಿಫೈಯರ್ ಆಟಗಾರನನ್ನು ಎದುರಿಸಿದರೆ, ಅನುಪಮಾ ಡೆನ್ಮಾರ್ಕ್‌ನ ಹೊಜ್‌ಮಾರ್ಕ್ ಕ್ಜರ್ಸ್‌ಫೆಲ್ಡ್ ಸವಾಲನ್ನು ಎದುರಿಸಲಿದ್ದಾರೆ.

ರಕ್ಷಿತಾ ಶ್ರೀ ತನ್ನ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ಇನ್ನೋರ್ವ ಆಟಗಾರ್ತಿ ಲೈನ್ ಕ್ರಿಸ್ಟೋಫರ್ಸನ್‌ರನ್ನು ಎದುರಿಸಲಿದ್ದಾರೆ.

ಇಂಡಿಯಾ ಓಪನ್ ಸೂಪರ್-750 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಕಿರಣ್ ಜಾರ್ಜ್ ಪುರುಷರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್ ಗಿಮ್ಕೆ ಅವರನ್ನು ಎದುರಿಸಲಿದ್ದು, ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುವತ್ತ ಚಿತ್ತಹರಿಸಿದ್ದಾರೆ.

ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ 4ನೇ ಶ್ರೇಯಾಂಕದ ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ತಮ್ಮ ಮೊದಲ ಪಂದ್ಯದಲ್ಲಿ ಅಲೈನ್ ಮುಲ್ಲರ್ ಹಾಗೂ ಕೆಲ್ಲಿ ವಾನ್ ಬುಟೆನ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್ ಕ್ವಾಲಿಫೈಯರ್ ಸುತ್ತಿನಲ್ಲಿ ಭಾರತದ ಐವರು ಆಟಗಾರರಾದ 2015ರ ಚಾಂಪಿಯನ್ ಶ್ರೀಕಾಂತ್, ಆಯುಷ್ ಶೆಟ್ಟಿ, ತರುಣ್ ಮನ್ನೆಪಲ್ಲಿ, ಎಸ್.ಶಂಕರ್ ಮುತ್ತುಸ್ವಾಮಿ ಹಾಗೂ ಸತೀಶ್ ಸ್ಪರ್ಧಿಸಲಿದ್ದಾರೆ.

ಇಶಾರಾಣಿ ಬರುವಾ, ತಸ್ನಿಮ್ ಮಿರ್ ಹಾಗೂ ಅನ್ಮೋಲ್ ಖರ್ಬ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅರ್ಹತೆ ಪಡೆಯಲು ಹೋರಾಟ ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News