×
Ad

ಅಫ್ಘಾನ್ ವಿರುದ್ಧ 241 ರನ್ ಗೆ ಆಲೌಟ್ ಆದ ಶ್ರೀಲಂಕಾ

Update: 2023-10-30 17:58 IST

PHOTO : cricketworldcup.com

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 241 ರನ್ ಗಳಿಗೆ ಆಲೌಟ್ ಆಯಿತು.

ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ದುಕೊಂಡು ಶ್ರೀಲಂಕಾಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಶ್ರೀಲಂಕಾದ ಆರಂಭಿಕ ಬ್ಯಾಟರ್ ಗಳಾದ ಪಾತುಂ ನಿಸ್ಸಾಂಕ ಮತ್ತು ದಿಮುತ್ ಕರುಣಾರತ್ನೆ ನೀರಿಕ್ಷೀತ ಆರಂಭ ಪಡೆಯುವಲ್ಲಿ ಎಡವಿದರು. ದಿಮುತ್ ಕರುಣಾರತ್ನೆ 5.2 ಓವರ್‌ ನಲ್ಲಿ ಫಝಲ್‌ ಹಕ್‌ ಫಾರೂಕ್‌ ಬೌಲಿಂಗ್‌ ನಲ್ಲಿ 15 ರನ್‌ ಗೆ ಎಲ್‌ ಬಿ ಡಬ್ಲ್ಯೂ ಬಲೆಗೆ ಬಿದ್ದರು.  

22 ರನ್‌ ಗೆ ಮೊದಲ ವಿಕೆಟ್‌ ಕಳೆದುಕೊಂಡ ಶ್ರೀಲಂಕಾ ಆಘಾತ ಅನುಭವಿಸಿತು. ಓಪನರ್‌ ಬ್ಯಾಟರ್‌ ಪಾತುಮ್‌ ನಿನ್ಸಾಂಕ ಸ್ವಲ್ಪ ಮಟ್ಟಿಗೆ ಕ್ರೀಸ್‌ ಗೆ ಅಂಟಿಕೊಂಡು ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದರು. 60 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 46 ರನ್‌ ಗಳಿಸಿದ್ದ ಅವರು, ಅರ್ಧ ಶತಕದ ಹೊಸ್ತಿಲಲ್ಲಿ ಅಝ್ಮತುಲ್ಲಾ ಓಮರ್‌ಝಾಯಿ ಅವರ ಬೌಲಿಂಗ್‌ ನಲ್ಲಿ ರಹ್ಮತುಲ್ಲಾ ಗರ್ಬಾಝ್‌ ಅವರಿಗೆ ಕ್ಯಾಚಿತ್ತು ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು.18.1 ಓವರ್‌ ಗೆ 84 ರನ್‌ ಗೇ ಲಂಕಾದ 2 ನೇ ವಿಕೆಟ್‌ ಪತನವಾಯಿತು. 

27.4 ನೇ ಓವರ್‌ ನಲ್ಲಿ ಕುಸಾಲ್ ಮೆಂಡಿಸ್‌ 50 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 39 ರನ್‌ ಗಳಿಸಿದ್ದಾಗ ಮುಜೀಬುರ್ರಹ್ಮಾನ್‌ ಬೌಲಿಂಗ್‌ ನಲ್ಲಿ ನಜೀಬುಲ್ಲಾ ಝರ್ದಾನ್‌ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಸದೀರ ಸಮರವಿಕ್ರಮ ಸ್ವಲ್ಪ ಮಟ್ಟಿಗೆ ಉತ್ತಮ ಆಟ ಪ್ರದರ್ಶಿಸಿದರೂ, ಮುಜೀಬುರ್ರಹ್ಮಾನ್‌ ರ ಎಲ್‌ ಬಿ ಡಬ್ಲ್ಯೂ ಬಲೆಗೆ ಬಿದ್ದು ವಿಕೆಟ್‌ ಒಪ್ಪಿಸಿದರು. ಇವರನ್ನು ಹೊರತು ಪಡಿಸಿದರೆ ಲಂಕಾ ಪರ ಯಾವ ಬ್ಯಾಟರ್‌ ಗಳೂ ಉತ್ತಮ ರನ್‌ ಗಳಿಸಲಿಲ್ಲ. ಧನಂಜಯ ಡಿʼಸಿಲ್ವಾ 14, ಚರಿತ್‌ ಅಸಲಂಕ 22, ದುಶ್ಮಂತ ಚಮೀರ 1, ಮಹೇಶ್‌ ತೀಕ್ಷಣ 29, ಎಂಜೆಲೋ ಮ್ಯಾಥಿಸ್‌ 23, ಕಸುನ್‌ ರಜಿತ 5 ರನ್‌ ಗೆ ರನೌಟ್‌ ಆಗುವುದರೊಂದಿಗೆ 49.3 ಓವರ್‌ ಗೆ ಶ್ರೀಲಂಕಾ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ ಶ್ರೀಲಂಕಾ, ಅಫ್ಘಾನಿಸ್ತಾನದ ಎದುರು ಉತ್ತಮ ರನ್‌ ಗಳಿಸುವಲ್ಲಿಯೂ ವಿಫಲಗೊಂಡಿತು. ಶೀಲಂಕಾ ಬ್ಯಾಟರ್‌ ಗಳನ್ನು ಅಫ್ಘಾನಿಸ್ತಾನದ ಬೌಲರ್‌ ಗಳು ಇನ್ನಿಲ್ಲದಂತೆ ಕಾಡಿದರು. 

ಅಫ್ಘಾನಿಸ್ತಾನದ ಬೌಲರ್ ಫಝಲ್ ಹಕ್ ಫಾರೂಕಿ ಒಂದು ಮೇಡನ್‌ ಓವರ್‌ ಸಹಿತ 10 ಓವರ್‌ ಗಳಲ್ಲಿ 34 ರನ್‌ ನೀಡಿ,  4 ವಿಕೆಟ್ ಪಡೆದರು. ಮುಜೀಬುರ್ರಹ್ಮಾನ್‌ 2 ವಿಕೆಟ್‌ ಪಡೆದರು. ಅಝ್ಮತುಲ್ಲಾ ಓಮರ್ಝಾಯಿ, ರಶೀದ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News