ಅಷ್ಟೊಂದು ಉತ್ತಮ ಆರಂಭ ಎಷ್ಟೊಂದು ಕಳಪೆಯಾಗಿ ಕೊನೆಗೊಂಡಿತು: ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲಿಕ ವಿಷಾದ
Photo: PTI
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ಐಪಿಎಲ್ 2025ರ ಆವೃತ್ತಿಯ ಪ್ಲೇಆಫ್‌ನಿಂದ ಹೊರಬಿದ್ದ ಬಳಿಕ, ತಂಡದ ಸಹ ಮಾಲಿಕ ಪಾರ್ಥ ಜಿಂದಾಲ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ಮುಂಬೈಯ ವಾಂಖೆಡೆ ಸ್ಟೇಡಿಯಮ್ ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್‌ಗಳಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ಉಳಿದಿದ್ದ ನಾಲ್ಕನೇ ಹಾಗೂ ಕೊನೆಯ ಪ್ಲೇಆಫ್ ಸ್ಥಾನವನ್ನು ಬಾಚಿಕೊಂಡಿದೆ.
ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಹಾಕಿದ ಜಿಂದಾಲ್, ಹಾಲಿ ಐಪಿಎಲ್ ಋತುವಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
‘‘ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ. ಋತುವಿನ ದ್ವಿತೀಯಾರ್ಧದ ಬಳಿಕ ನಾನು ಕೂಡ ನಿಮ್ಮಂತೆಯೇ ಜೋಲಿ ಹೊಡೆದಿದ್ದೇನೆ. ಅಷ್ಟೊಂದು ಉತ್ತಮ ಆರಂಭವು ಎಷ್ಟೊಂದು ಕಳಪೆಯಾಗಿ ಕೊನೆಗೊಂಡಿತು!’’ ಎಂಬುದಾಗಿ ಅವರು ತನ್ನ ಸಂದೇಶದಲ್ಲಿ ಬರೆದಿದ್ದಾರೆ.
‘‘ಈ ಋತುವಿನಿಂದ ತೆಗೆದುಕೊಂಡು ಹೋಗಬಹುದಾದ ಹಲವು ಧನಾತ್ಮಕ ಅಂಶಗಳಿವೆ. ಆದರೆ, ಈಗಿನ ಮಟ್ಟಿಗೆ ನಮ್ಮ ಎಲ್ಲಾ ಗಮನ ಮುಂದಿನ ಪಂದ್ಯದ ಮೇಲಿದೆ. ಅದನ್ನು ನಾವು ಗೆಲ್ಲಬೇಕಾಗಿದೆ. ಈ ಋತುವಿನ ಸಮಾಪ್ತಿ ಬಳಿಕ, ಹಲವು ವಿಷಯಗಳ ಬಗ್ಗೆ ತುಂಬಾ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ’’ ಎಂದು ಜಿಂದಾಲ್ ಬರೆದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ, ಮೊದಲ 4 ಪಂದ್ಯಗಳನ್ನು ಗೆದ್ದ ಬಳಿಕ ಪ್ಲೇಆಫ್‌ನಿಂದ ಹೊರಬಿದ್ದಿರುವ ಮೊದಲ ತಂಡ ಡೆಲ್ಲಿ ಕ್ಯಾಪಿಟಲ್ಸ್ ಆಗಿದೆ. ಅದು ತನ್ನ ಮೊದಲ 8 ಪಂದ್ಯಗಳಿಂದ 6 ವಿಜಯಗಳನ್ನು ಗಳಿಸಿತ್ತಾದರೂ, ದ್ವಿತೀಯಾರ್ಧದಲ್ಲಿ ನಾಟಕೀಯ ಕುಸಿತವನ್ನು ಕಂಡಿತು. ಅದು ತನ್ನ ಕೊನೆಯ 5 ಪೂರ್ಣಗೊಂಡ ಪಂದ್ಯಗಳಲ್ಲಿ 4ರಲ್ಲಿ ಸೋಲನುಭವಿಸಿದೆ.
ತಂಡವು ಈವರೆಗೆ 13 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದೆ. ಅದು ತನ್ನ ಕೊನೆಯ ಲೀಗ್ ಪಂದ್ಯವನ್ನು ಶನಿವಾರ ಜೈಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.