ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಸನ್ ರೈಸರ್ಸ್ ಹೈದರಾಬಾದ್

Update: 2024-03-27 16:20 GMT

Photo: X \ @IPL 

ಹೈದರಾಬಾದ್ : ಇಲ್ಲಿನ ಹೊರವಲಯದ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 20 ಓವರ್ ಗಳಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆವರಿಳಿಸಿದ ಹೈದರಾಬಾದ್ ತಂಡವು 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಆ ಮೂಲಕ 2013ರ ಎಪ್ರಿಲ್ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ RCB ದಾಖಲಿಸಿದ್ದ 263 ರನ್ ದಾಖಲೆಯನ್ನು ಮುರಿಯಿತು.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವನ್ನು ಬ್ಯಾಟಿಂಗ್‌ ಗೆ ಆಹ್ವಾನಿಸಿತು. ಹೈದರಾಬಾದ್‌ ಪರ ಇನ್ನಿಂಗ್ಸ್‌ ಆಹ್ವಾನಿಸಿದ ಮಯಂಕ್‌ ಅಗರ್ವಾಲ್‌ ಮತ್ತು ಟ್ರಾವಿಸ್‌ ಹೆಡ್‌ ತಂಡಕ್ಕೆ ಸ್ಪೋಟಕ ಆರಂಭ ನೀಡಿದರು. 13 ಎಸೆತ ಎದುರಿಸಿದ ಮಯಂಕ್‌ ಅಗರ್ವಾಲ್‌ ಒಂದು ಬೌಂಡರಿಯೊಂದಿಗೆ 11 ರನ್‌ ಗಳಿಸಿದರು. ಹಾರ್ದಿಕ್‌ ಪಾಂಡ್ಯ ಎಸೆತದಲ್ಲಿ ಟಿಮ್‌ ಡೇವಿಡ್‌ ಗೆ ಮಯಂಕ್‌ ಕ್ಯಾಚಿತ್ತಾಗ SRH 4.1 ಓವರ್‌ ಗಳಲ್ಲಿ 45 ರನ್‌ ಗಳಿಸಿತ್ತು. 

ಮಯಂಕ್‌ ಸ್ಥಾನ ತುಂಬಲು ಅಭಿಷೇಕ್‌ ಶರ್ಮಾ ಕ್ರೀಸ್‌ ಗೆ ಬಂದರು. ವಿಶ್ವಕಪ್‌ ಹೀರೋ ಟ್ರಾವಿಸ್‌ ಹೆಡ್‌ ಕ್ರೀಸ್‌ ನಲ್ಲಿದ್ದರು. ಇಬ್ಬರ ಜೋಡಿ ಮುಂಬೈ ಇಂಡಿಯನ್ಸ್‌ ತಂಡದ ಬೆವರಿಳಿಸಿತು. 24 ಎಸೆತ ಎದುರಿಸಿದ ಟ್ರಾವಿಸ್‌ ಹೆಡ್‌ 9 ಬೌಂಡರಿ, 3 ಸಿಕ್ಸರ್‌ ಗಳ ಸಹಿತ 62 ರನ್‌ ಗಳ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ತಂಡವು 7.5 ಓವರ್‌ ಗಳಲ್ಲಿ 113 ರನ್‌ ಗಳಿಸಿದ್ದಾಗ, 62 ರನ್‌ ಗಳಿಸಿದ ಟ್ರಾವಿಸ್‌ ಹೆಡ್‌ ಜೆರಾಲ್ಡ್‌ ಕೊಯೆಟ್ಝೀ ಬೌಲಿಂಗ್‌ ನಲ್ಲಿ ನಮನ್‌ ಧಿರ್‌ ಗೆ ಕ್ಯಾಚಿತ್ತು ಪೆವಿಲಿಯನ್‌ ದಾರಿ ಹಿಡಿದರು. ಅವರ ಅಧ್ವುತ ಇನ್ನಿಂಗ್ಸ್‌ ಗೆ ಮನಸೋತ ಉಪ್ಪಳದ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಿದರು. 

ಟ್ರಾವಿಸ್‌ ಹೆಡ್‌ ಹಾಕಿಕೊಟ್ಟ ಹಾದಿಯನ್ನು ಮುಂದುವರೆಸಿದ ಅಭಿಷೇಕ್‌ ಶರ್ಮಾ 23 ಎಸೆಗಳಲ್ಲಿ 63  ರನ್‌ ಗಳಿಸಿದರು. 7 ಸಿಕ್ಸರ್‌ ಸಹಿತ 3 ಬೌಂಡರಿ ಬಾರಿಸಿದ ಅವರು ಹೈದರಾಬಾದ್‌ ತಂಡವು ಬೃಹತ್‌ ಮೊತ್ತ ಪೇರಿಸಲಿದೆ ಎಂಬ ಮುನ್ಸೂಚನೆ ನೀಡಿದರು. ಪಿಯೂಷ್‌ ಚಾವ್ಲಾ ಓವರ್‌ ನಲ್ಲಿ ನಮನ್‌ ಧಿರ್‌ ಗೆ ಕ್ಯಾಚಿತ್ತ ಅಭಿಷೇಕ್‌ ಶರ್ಮಾ ಸ್ಥಾನ ತುಂಬಲು ಹೆನ್ರಿಚ್‌ ಕ್ಲಾಸೆನ್‌ ಕ್ರೀಸ್‌ ಗೆ ಬಂದರು.

ಸೊಗಸಾದ ಆಟವಾಡಿದ ಹೆನ್ರಿಚ್‌ ಕ್ಲಾಸೆನ್‌ 34 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್‌ ಗಳ ಸಹಿತ 80 ರನ್‌ ಗಳಿಸಿ ಹೈದರಾಬಾದ್‌ ತಂಡವು ಐಪಿಎಲ್‌ ಇತಿಹಾಸದಲ್ಲೇ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ಬರೆಯಲು ನೆರವಾದರು. ಐಡನ್‌ ಮಕ್ರಮ್‌ 28 ಎಸೆತಗಳಲ್ಲಿ 2 ಬೌಂಡರಿ, 1  ಸಿಕ್ಸರ್‌ ಬಾರಿ 42 ರನ್‌ ಗಳಿಸಿ ಕ್ಲಾಸೆನ್‌ ಜೊತೆ ಅಜೇಯವಾಗಿ ಉಳಿದರು. 

ಹಾರ್ದಿಕ್‌ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ಪರ ಕ್ವೇನ ಮಫಕ 4  ಓವರ್‌ ಗಳಲ್ಲಿ 66 ರನ್‌ ಬಿಟ್ಟುಕೊಟ್ಟು ಅತೀ ದುಬಾರಿಯಾದರು. ಜೆರಾಲ್ಡ್‌ 4 ಓವರ್‌‌ ಗೆ 57 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದರು. ಹಾದರಿಕ್‌ ಪಾಂಡ್ಯ 4 ಓವರ್‌ ಗೆ 46 ರನ್‌ ನೀಡಿ 1 ವಿಕೆಟ್‌ ಪಡೆದರು. ಬೂಮ್ರಾ 36 ರನ್‌ ನೀಡಿದರು. ಪಿಯುಷ್‌ ಚಾವ್ಲಾ 2 ಓವರ್‌ ಗೆ 34 ರನ್‌ ನೀಡಿ 1 ವಿಕೆಟ್‌ ಪಡೆದರು. ಶಮ್ಸ್‌ ಮುಲನಿ 2 ಓವರ್‌ ಗೆ 33 ರನ್‌ ನೀಡಿ ದುಬಾರಿ ಎನಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News