ಸೂರ್ಯ ಕುಮಾರ್ ಶತಕ, ಹರಿಣಗಳಿಗೆ 202 ರನ್ ಗುರಿ ನೀಡಿದ ಭಾರತ
ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ವೈಖರಿ | PHOTO : x/@bcci
ಜೊಹಾನ್ಸ್ ಬರ್ಗ್ : ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ಸೂರ್ಯ ಕುಮಾರ್ ಯಾದವ್ ಅವರ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾಕ್ಕೆ 202 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. 6 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 8 ರನ್ ಗಳಿಸಿದ ಗಿಲ್ ಭಾರತ ತಂಡ 29 ರನ್ ಗಳಿಸಿದ್ದಾಗ 2.2 ನೇ ಓವರ್ ನಲ್ಲಿ ಕೇಶವ್ ಮಹರಾಜ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
ಅವರ ಸ್ಥಾನ ತುಂಬಲು ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ತಿಲಕ್ ವರ್ಮಾ ಮೊದಲ ಎಸೆತದಲ್ಲಿಯೇ ಏಡನ್ ಮಾಕ್ರಮ್ ಅವರಿಗೆ ಕ್ಯಾಚಿತ್ತು ಶೂನ್ಯ ಸುತ್ತಿದರು. ಕೇಶವ್ ಮಹಾರಾಜ್ ಗೆ ಹ್ಯಾಟ್ರಿಕ್ ವಿಕೆಟ್ ಅವಕಾಶವಿತ್ತಾದರೂ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಸೂರ್ಯ ಕುಮಾರ್ ಯಾದವ್ ಅದಕ್ಕೆ ಅವಕಾಶ ನೀಡಲಿಲ್ಲ.
2.3 ಓವರ್ ಗೆ 29 ರನ್ ಗೆ ಪ್ರಮುಖ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ತಂಡಕ್ಕೆ ಆಘಾತವಾಯಿತು. ರಕ್ಷಣಾತ್ಮಕ ಆಟವಾಡುತ್ತಾ ಭರ್ಜರಿಯಾಗಿ ಬ್ಯಾಟ್ ಬೀಸಿದ ಸೂರ್ಯ ಕುಮಾರ್ ಯಾದವ್ - ಯಶಸ್ವಿ ಜೈಸ್ವಾಲ್ ಜೋಡಿಯ ಜೊತೆಯಾಟ ಭಾರತಕ್ಕೆ ಉತ್ತಮ ಇನ್ಸಿಂಗ್ ಕಟ್ಟಿತು. 41 ಎಸೆತ ಎದುರಿಸಿದ ಯಶಸ್ವಿ ಜೈಸ್ವಾಲ್ 6 ಬೌಂಡರಿ 3 ಸಿಕ್ಸರ್ ಸಹಿತ 60 ರನ್ ಗಳಿಸಿದರು.
13.6 ಓವರ್ ನಲ್ಲಿ ತಬ್ರೇಸ್ ಶಂಸಿ ಎಸೆತದಲ್ಲಿ ರೀಝಾ ಹೆಂಡ್ರಿಕ್ಸ್ ಗೆ ಕ್ಯಾಚ್ ನೀಡಿದ ಜೈಸ್ವಾಲ್ ಪೆವಿಲಿಯನ್ ದಾರಿ ಹಿಡಿದರು. ಬಳಿಕ ಕ್ರೀಸ್ ಗೆ ಬಂದ ರಿಂಕು ಸಿಂಗ್ ಅವರು ಸೂರ್ಯ ಕುಮಾರ್ ಶತಕದಾಟಕ್ಕೆ ಸಾಥ್ ನೀಡಿದರು. 56 ಎಸೆತ ಎದುರಿಸಿದ ಸೂರ್ಯ ಕುಮಾರ್ ಯಾದವ್ 7 ಬೌಂಡರಿ 8 ಸಿಕ್ಸರ್ ಗಳೊಂದಿಗೆ 100 ರನ್ ಗಳಿಸಿದರು. ತಮ್ಮ ಭರ್ಜರಿ ಹೊಡೆತದ ಮೂಲಕ ಜೊಹಾನ್ಸ್ ಬರ್ಗ್ ಸ್ಟೇಡಿಯಂನಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು.
ರಿಂಕು ಸಿಂಗ್ 14, ಜಿತೇಶ್ ಶರ್ಮ 4(ಹಿಟ್ ವಿಕೆಟ್), ರವೀಂದ್ರ ಜಡೇಜಾ 4 ರನ್ ಗಳಿಸಿದರು. ಮುಹಮ್ಮದ್ ಸಿರಾಜ್ 2 ರನ್, ಅರ್ಶದೀಪ್ ಸಿಂಗ್ ಅಜೇಯರಾಗಿ ಕ್ರೀಸ್ ನಲ್ಲಿದ್ದರು. 7 ವಿಕೆಟ್ ಕಳೆದುಕೊಂಡ ಭಾರತ ದಕ್ಷಿಣ ಆಫ್ರಿಕಾಕ್ಕೆ 202 ರನ್ ಗಳ ಗುರಿ ನೀಡಿದೆ.
ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್, ಲಿಝ್ಝರ್ಡ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದರು. ನಾಂದ್ರೆ ಬರ್ಗರ್, ತಬ್ರೀಝ್ ಶಂಸಿ ತಲಾ ಒಂದು ವಿಕೆಟ್ ಪಡೆದರು.