ಮೊದಲ ಬಾರಿ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡ ಟ್ರೀಸಾ-ಗಾಯತ್ರಿ
PC : PTI
ಲಕ್ನೊ : ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ತಮ್ಮ ಮೊದಲ ಸೂಪರ್-300 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ಗೆ ಅರ್ಹತೆ ಪಡೆದಿರುವ ಟ್ರೀಸಾ ಹಾಗೂ ಗಾಯತ್ರಿ ರವಿವಾರ ಚೀನಾದ ಬಾವೊ ಲಿ ಜಿಂಗ್ ಹಾಗೂ ಲಿ ಕ್ಷಿಯಾನ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತೀಯ ಜೋಡಿಯು ತಮ್ಮ ಅಮೋಘ ಫಾರ್ಮ್ ಪ್ರದರ್ಶಿಸಿದೆ. ಕೇವಲ 40 ನಿಮಿಷಗಳಲ್ಲಿ ಕೊನೆಗೊಂಡಿರುವ ಫೈನಲ್ ಪಂದ್ಯವನ್ನು 21-18, 21-11 ಗೇಮ್‌ಗಳ ಅಂತರದಿಂದ ಗೆದ್ದುಕೊಂಡಿತು.
ಭಾರತೀಯ ಬ್ಯಾಡ್ಮಿಂಟನ್ ಪಾಲಿಗೆ ಈ ಗೆಲುವು ಐತಿಹಾಸಿಕ ಸಾಧನೆಯಾಗಿದೆ. ಟ್ರೀಸಾ ಹಾಗೂ ಗಾಯತ್ರಿ, ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಪ್ರಶಸ್ತಿ ಗೆದ್ದಿರುವ ಭಾರತದ ಮೊದಲ ಡಬಲ್ಸ್ ಜೋಡಿಯಾಗಿದೆ. ಈ ಜೋಡಿಯು 2022ರ ಆವೃತ್ತಿಯ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಆಗಿತ್ತು.
ಭಾರತದ ಜೋಡಿ 4-0 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿತ್ತು. ಮರು ಹೋರಾಟ ನೀಡಿರುವ ಚೀನಾದ ಜೋಡಿ ಸ್ಕೋರನ್ನು 14-14ರಿಂದ ಸಮಬಲಗೊಳಿಸಿತ್ತು.
ಚೀನಾ ಜೋಡಿಯ ತಪ್ಪಿನ ಲಾಭ ಪಡೆದ ಟ್ರೀಸಾ-ಗಾಯತ್ರಿ ಜೋಡಿ 17-15 ಅಂತರದಿಂದ ಮುನ್ನಡೆ ಪಡೆಯಿತು. ಮೊದಲ ಗೇಮ್ ಅನ್ನು 21-18 ಅಂತರದಿಂದ ಜಯಿಸಿದ ಭಾರತದ ಜೋಡಿಯು ಎರಡನೇ ಸೆಟ್ಟನ್ನು 21-11 ಅಂತರದಿಂದ ಗೆದ್ದುಕೊಂಡಿತು.
► ಪೃಥ್ವಿ-ಸಾಯಿ, ತನಿಶಾ-ಧ್ರುವ್ ರನ್ನರ್ಸ್ ಅಪ್
ಪುರುಷರ ಡಬಲ್ಸ್ ಫೈನಲ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್ ಹಾಗೂ ಸಾಯಿ ಪ್ರತೀಕ್ ತೀವ್ರ ಹೋರಾಟ ನೀಡಿದರೂ ಅಂತಿಮವಾಗಿ ಸೋಲೊಪ್ಪಿಕೊಂಡರು. ಪೃಥ್ವಿ-ಸಾಯಿ ಜೋಡಿಯು 3 ಗೇಮ್‌ಗಳ ಪಂದ್ಯದಲ್ಲಿ ಚೀನಾದ ಹುಯಾಂಗ್ ಡಿ ಹಾಗೂ ಲಿಯು ಯಾಂಗ್ ಎದುರು ಸೋತಿದೆ.
71 ನಿಮಿಷಗಳಲ್ಲಿ ಅಂತ್ಯಗೊಂಡಿರುವ ಫೈನಲ್ ಪಂದ್ಯದಲ್ಲಿ ಪೃಥ್ವಿ-ಸಾಯಿ ಜೋಡಿ 14-21, 21-19, 17-21 ಅಂತರದಿಂದ ಸೋಲುಂಡಿದೆ.
ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಭಾರತದ ಜೋಡಿ ತನಿಶಾ ಹಾಗೂ ಧ್ರುವ್ ಥಾಯ್ಲೆಂಡ್‌ನ ಆರನೇ ಶ್ರೇಯಾಂಕದ ಜೋಡಿಯ ಎದುರು ಸೋಲುಂಡಿದೆ. ದೆಚಾಪೊಲ್ ಹಾಗೂ ಸುಪಿಸ್ಸರಾ 18-21, 21-14, 21-8 ಅಂತರದಿಂದ ಜಯ ಸಾಧಿಸಿದೆ.
ಪೃಥ್ವಿ ಹಾಗೂ ಸಾಯಿ ಜೋಡಿ ಮೊದಲ ಗೇಮ್ ಅನ್ನು 21-18 ಅಂತರದಿಂದ ಗೆದ್ದುಕೊಂಡಿತು. ಎರಡನೇ ಗೇಮ್‌ನಲ್ಲೂ 11-7 ಮುನ್ನಡೆ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಿರುಗೇಟು ನೀಡಿದ ಚೀನಾದ ಜೋಡಿ 2ನೇ ಸೆಟ್ಟನ್ನು 21-14 ಅಂತರದಿಂದ ಗೆದ್ದುಕೊಂಡು ಪಂದ್ಯವನ್ನು ಸಮಬಲಗೊಳಿಸಿತು.
ನಿರ್ಣಾಯಕ ಗೇಮ್‌ನಲ್ಲಿ ಪೃಥ್ವಿ ಹಾಗೂ ಸಾಯಿ ಅವರು ಪ್ರತಿರೋಧ ಒಡ್ಡಿದರು. 1-5 ಹಿನ್ನಡೆಯಿಂದ ಚೇತರಿಸಿಕೊಂಡು 7-7ರಿಂದ ಸಮಬಲಗೊಳಿಸಿದರು. ಸಾಯಿ ಅವರ ಶಕ್ತಿಶಾಲಿ ಸ್ಮ್ಯಾಶ್‌ಗಳು ಮರಳಿ ಹೋರಾಟಕ್ಕೆ ಕೊಡುಗೆ ನೀಡಿತು.
ಭಾರತೀಯ ಜೋಡಿಯ ಭಾರೀ ಪ್ರಯತ್ನದ ಹೊರತಾಗಿಯೂ ಚೀನಾದ ಜೋಡಿಯು 21-8 ಅಂತರದಿಂದ ಪಂದ್ಯವನ್ನು ಜಯಿಸಿತು.