ಅಂಡರ್-19 ಏಶ್ಯ ಕಪ್: ಭಾರತ ಸೆಮಿಫೈನಲ್ ಗೆ
Photo: X
ದುಬೈ: ಮಂಗಳವಾರ ಇಲ್ಲಿ ನಡೆದ ಅಂಡರ್-19 ಏಶ್ಯ ಕಪ್ ಕ್ರಿಕೆಟ್ ಪಂದ್ಯವೊಂದರಲ್ಲಿ, ವೇಗಿ ರಾಜ್ ಲಿಂಬಾನಿಯ ಏಳು ವಿಕೆಟ್ಗಳ ನೆರವಿನಿಂದ ಭಾರತವು ನೇಪಾಳವನ್ನು 10 ವಿಕೆಟ್ ಗಳ ಭರ್ಜರಿ ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತವು ಸೆಮಿಫೈನಲ್ ತಲುಪಿದೆ.
ಲಿಂಬಾನಿ ಕೇವಲ 13 ರನ್ ಗಳನ್ನು ನೀಡಿ 7 ವಿಕೆಟ್ಗಳನ್ನು ಉರುಳಿಸಿದರು. ಅವರ ಬೌಲಿಂಗ್ ಕೌಶಲದಿಂದಾಗಿ ನೇಪಾಳವು ತನ್ನ ಇನಿಂಗ್ಸನ್ನು 22.1 ಓವರ್ ಗಳಲ್ಲಿ ಕೇವಲ 52 ರನ್ಗಳಿಗೆ ಮುಕ್ತಾಯಗೊಳಿಸಿತು. ಆ ಬಳಿಕ, ಆಲ್ರೌಂಡರ್ ಅರ್ಶಿನ್ ಕುಲಕರ್ಣಿ ತನ್ನ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿ ಭಾರತಕ್ಕೆ ಸುಲಭ ಜಯವೊಂದನ್ನು ಖಾತರಿಗೊಳಿಸಿದರು. ಅವರು 43 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು ಐದು ಬೃಹತ್ ಸಿಕ್ಸರ್ ಗಳನ್ನು ಬಾರಿಸಿದರು. ಭಾರತವು ಕೇವಲ 7.1 ಓವರ್ ಗಳಲ್ಲಿ ವಿಜಯದ ಗುರಿಯನ್ನು ತಲುಪಿತು.
ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 8 ವಿಕೆಟ್ಗಳ ಸೋಲು ಅನುಭವಿಸಿದ ಬಳಿಕ, ಉದಯ ಸಹರನ್ ನೇತೃತ್ವದ ಭಾರತ ತಂಡಕ್ಕೆ ಸೆಮಿಫೈನಲ್ ತಲುಪಲು ಈ ಪಂದ್ಯವನ್ನು ಗೆಲ್ಲುವುದು ಅಗತ್ಯವಾಗಿತ್ತು.
ನೇಪಾಳವು ತನ್ನ ಎಲ್ಲಾ ಮೂರು ಪಂದ್ಯಗಳನ್ನು ಸೋತು ಕೂಟದಿಂದ ಹೊರಬಿದ್ದಿದೆ.
ನೇಪಾಳದ ಕೊನೆಯ ಪಂದ್ಯದಲ್ಲಿ ಯಾವುದೇ ಬ್ಯಾಟರ್ ಗೆ ಎರಡಂಕಿಯ ಮೊತ್ತ ತಲುಪಲು ಸಾಧ್ಯವಾಗಲಿಲ್ಲ.
ಟಾಸ್ ಗೆದ್ದ ಭಾರತವು ಮೊದಲು ನೇಪಾಳವನ್ನು ಬ್ಯಾಟಿಂಗ್ಗೆ ಇಳಿಸಿತು. ಬರೋಡದ 18 ವರ್ಷದ ಬಲಗೈ ವೇಗಿ ಲಿಂಬಾನಿ ಅಮೋಘ ಬೌಲಿಂಗ್ ಪ್ರದರ್ಶನವನ್ನು ನೀಡಿ ಯಾವುದೇ ಎದುರಾಳಿ ಬ್ಯಾಟರ್ ಗಳು ಕ್ರೀಸ್ನಲ್ಲಿ ತಳವೂರದಂತೆ ನೋಡಿಕೊಂಡರು.
ಆದರೆ, ಅವರಿಗೆ ಇರ್ಫಾನ್ ಪಠಾಣ್ರ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಮಾಜಿ ವೇಗಿ ಪಠಾಣ್ 2004ರಲ್ಲಿ ಲಾಹೋರ್ ನಲ್ಲಿ ನಡೆದ ಜೂನಿಯರ್ ಏಶ್ಯ ಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯವೊದರಲ್ಲಿ ಕೇವಲ 16 ರನ್ಗಳನ್ನು ನೀಡಿ 9 ವಿಕೆಟ್ಗಳನ್ನು ಉರುಳಿಸಿದ್ದರು.
ಎಂಟು ರನ್ಗಳನ್ನು ಗಳಿಸಿದ ನೇಪಾಳದ ಹೇಮಂತ್ ಧಾಮಿ ತಂಡದ ಗರಿಷ್ಠ ರನ್ ಗಳಿಕೆದಾರರಾದರು. ಅದನ್ನು ಅವರು ಎರಡು ಬೌಂಡರಿಗಳ ಮೂಲಕ ಗಳಿಸಿದರು. ಆ ಮೂಲಕ ತಂಡದ ಮೊತ್ತವು 50 ರನ್ ಗಡಿಯನ್ನು ದಾಟಲು ನೆರವಾದರು.
ವಿಜಯದ ಗುರಿಯನ್ನು ಬೆನ್ನತ್ತುವುದು ಭಾರತಕ್ಕೆ ಕಷ್ಟವಾಗಲಿಲ್ಲ. ಆರಂಭಿಕ ಆಟಗಾರ ಅರ್ಶಿನ್ ನೇಪಾಳಿ ಬೌಲರ್ ಗಳನ್ನು ಲೀಲಾಜಾಲವಾಗಿ ಎದುರಿಸಿದರು.
ಅವರು ಅಫ್ಘಾನಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಜೇಯ 70 ರನ್ಗಳನ್ನು ಗಳಿಸಿದ್ದರು ಮತ್ತು ಮೂರು ವಿಕೆಟ್ಗಳನ್ನೂ ಉರುಳಿಸಿದ್ದರು.
ಸಂಕ್ಷಿಪ್ತ ಸ್ಕೋರ್
ನೇಪಾಳ : 22.1 ಓವರ್ ಗಳಲ್ಲಿ 52
ಅರ್ಜುನ್ ಕುಮಾಲ್ 7, ದೀಪಕ್ ಬೊಹಾರ 7, ಹೇಮಂತ್ ಧಾಮಿ 8
ರಾಜ್ ಲಿಂಬಾನಿ 7-13
ಭಾರತ
7.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57
ಆದರ್ಶ್ ಸಿಂಗ್ 13 (ಅಜೇಯ), ಅರ್ಶಿನ್ ಕುಲಕರ್ಣಿ 43 (ಅಜೇಯ)