×
Ad

ವಿಶಾಖಪಟ್ಟಣ ಸ್ಟೇಡಿಯಂ ಸ್ಟ್ಯಾಂಡ್‌ಗಳಿಗೆ ಮಿಥಾಲಿ ರಾಜ್, ರವಿ ಕಲ್ಪನಾ ಹೆಸರಿಡಲು ನಿರ್ಧಾರ

Update: 2025-10-06 20:44 IST

Photo Credit : ACA–VDCA Cricket Stadium

ಹೈದರಾಬಾದ್, ಅ.6: ಮಹಿಳೆಯರ ಕ್ರಿಕೆಟನ್ನು ಪ್ರೋತ್ಸಾಹಿಸುವ ಐತಿಹಾಸಿಕ ಹೆಜ್ಜೆಯೊಂದರಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಶನ್(ಎಸಿಎ)ವಿಶಾಖಪಟ್ಟಣದಲ್ಲಿರುವ ಎಸಿಎ-ವಿಡಿಸಿಎ ಸ್ಟೇಡಿಯಂನ ಎರಡು ಸ್ಟ್ಯಾಂಡ್‌ಗಳಿಗೆ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌‌ ಹಾಗೂ ರವಿ ಕಲ್ಪನಾರ ಹೆಸರನ್ನು ಇಟ್ಟು ಗೌರವಿಸಲು ನಿರ್ಧರಿಸಿದೆ.

ಐಸಿಸಿ ಮಹಿಳೆಯರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವು ಅ.12ರಂದು ಆಸ್ಟ್ರೇಲಿಯ ತಂಡವನ್ನು ಎದುರಿಸಲಿದ್ದು, ಅದೇ ದಿನ ಈ ಎರಡು ಸ್ಟ್ಯಾಂಡ್‌ಗಳನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ.

2025ರ ಆಗಸ್ಟ್‌ನಲ್ಲಿ ‘ಬ್ರೇಕಿಂಗ್ ಬೌಂಡರೀಸ್’ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ಇಬ್ಬರು ಪ್ರಮುಖ ಮಹಿಳಾ ಕ್ರಿಕೆಟಿಗರ ಹೆಸರನ್ನು ಇಡುವಂತೆ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್‌ಗೆ ಮನವಿ ಮಾಡಿದ್ದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಲೋಕೇಶ್, ಎಸಿಎಯನ್ನು ಸಂಪರ್ಕಿಸಿದ್ದರು. ಆಂಧ್ರ ಹಾಗೂ ಭಾರತದ ಇಬ್ಬರು ಪ್ರಮುಖ ಆಟಗಾರ್ತಿಯರಿಗೆ ಗೌರವ ಸಲ್ಲಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು.

‘‘ ಸ್ಮತಿ ಮಂಧಾನ ಅವರ ಚಿಂತನಶೀಲ ಸಲಹೆಯು ಸಾರ್ವಜನಿಕರ ಭಾವನೆಯನ್ನು ವ್ಯಾಪಕವಾಗಿ ಸೆಳೆದಿದೆ. ಅವರ ಸಲಹೆಯನ್ನು ತಕ್ಷಣಕ್ಕೆ ಕಾರ್ಯರೂಪಕ್ಕೆ ತಂದಿರುವುದು ಲಿಂಗ ಸಮಾನತೆ ಹಾಗೂ ಮಹಿಳಾ ಕ್ರಿಕೆಟ್‌ನ ಹಾದಿ ತೋರಿಸುವವರನ್ನು ಗುರುತಿಸುವ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’’ ಎಂದು ಲೋಕೇಶ್ ಹೇಳಿದರು.

ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವಿನ ಪ್ರಮುಖ ಪಂದ್ಯಕ್ಕೆ ಮೊದಲು ಮಿಥಾಲಿ ರಾಜ್ ಹಾಗೂ ರವಿ ಕಲ್ಪನಾ ಅವರ ಹೆಸರಿನ ಸ್ಟ್ಯಾಂಡ್‌ಗಳನ್ನು ಅನಾವರಣಗೊಳಿಸಲಾಗುತ್ತದೆ. ವಿಝಾಗ್‌ನಲ್ಲಿ ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟಿಗರನ್ನು ಈ ರೀತಿ ಗೌರವಿಸಲಾಗುತ್ತಿದೆ.

ಭಾರತದ ಮಾಜಿ ನಾಯಕಿ ಹಾಗೂ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆಗೈದ ಬ್ಯಾಟರ್‌ಗಳ ಪೈಕಿ ಒಬ್ಬರಾದ ಮಿಥಾಲಿ ರಾಜ್ ದೇಶದಲ್ಲಿ ಮಹಿಳಾ ಕ್ರಿಕೆಟಿನ ಬೆಳವಣಿಗೆಗೆ ಹಾಗೂ ಘನತೆಯನ್ನು ಹೆಚ್ಚಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಆಂಧ್ರಪ್ರದೇಶದ ವಿಕೆಟ್‌ಕೀಪರ್-ಬ್ಯಾಟರ್ ರವಿ ಕಲ್ಪನಾ ರಾಜ್ಯ ಕ್ರಿಕೆಟ್‌ನಿಂದ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದರು. ಅವರ ಕ್ರಿಕೆಟ್ ಪಯಣವು ಆಂಧ್ರದ ಯುವತಿಯರಿಗೆ ಸ್ಫೂರ್ತಿ ನೀಡುತ್ತಲೇ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News