×
Ad

ವಾಶಿಂಗ್ಟನ್ ಸುಂದರ್‌ಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ; ತಂದೆಯ ಅಳಲು

Update: 2025-07-28 22:01 IST

ವಾಶಿಂಗ್ಟನ್ ಸುಂದರ್‌ | PC: PTI

ಲಂಡನ್, ಜು. 28: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧದ ಆ್ಯಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡಿರುವುದಕ್ಕಾಗಿ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಭಾರೀ ಪ್ರಶಂಸೆಗೆ ಒಳಗಾಗಿದ್ದಾರೆ.

ಅವರು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದ ಐದನೇ ದಿನವಾದ ರವಿವಾರ ರವೀಂದ್ರ ಜಡೇಜರೊಂದಿಗೆ 203 ರನ್‌ಗಳ ಅಜೇಯ ಭಾಗೀದಾರಿಕೆ ನಿಭಾಯಿಸಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಶತಕವನ್ನು ದಾಖಲಿಸಿದರು. ಅವರು 206 ಎಸೆತಗಳಲ್ಲಿ ಒಂಭತ್ತು ಬೌಂಡರಿಗಳು ಮತ್ತು ಒಂದು ಸಿಕ್ಸ್ ಒಳಗೊಂಡ 101 ರನ್‌ಗಳನ್ನು ಬಾರಿಸಿದರು.

ಮಗನ ಸಾಧನೆಗೆ ತಂದೆ ಎಮ್. ಸುಂದರ್ ಸಂತೋಷ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ, ತನ್ನ ಮಗನ ನಿರ್ವಹಣೆಗಳನ್ನು ಜನರು ಮರೆತುಬಿಡುತ್ತಾರೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

‘‘ವಾಶಿಂಗ್ಟನ್ ನಿರಂತರವಾಗಿ ಅತ್ಯುತ್ತಮ ನಿರ್ವಹಣೆಯನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಜನರು ಅದನ್ನು ಮರೆತುಬಿಡುತ್ತಾರೆ. ಇತರ ಆಟಗಾರರು ನಿರಂತರವಾಗಿ ಅವಕಾಶಗಳನ್ನು ಪಡೆಯುತ್ತಾರೆ. ಆದರೆ, ನನ್ನ ಮಗನಿಗೆ ಮಾತ್ರ ಅದು ಸಿಗುತ್ತಿಲ್ಲ. ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಮಾಡಿದಂತೆ ವಾಶಿಂಗ್ಟನ್ ಯಾವಾಗಲೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತು ನಿರಂತರವಾಗಿ ಐದರಿಂದ 10 ಅವಕಾಶಗಳನ್ನು ಪಡೆಯಬೇಕು. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ನನ್ನ ಮಗನನ್ನು ಆಯ್ಕೆ ಮಾಡದಿರುವುದು ಆಶ್ಚರ್ಯವಾಗಿದೆ. ಆಯ್ಕೆಗಾರರು ನನ್ನ ಮಗನ ನಿರ್ವಹಣೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು’’ ಎಂದು ಎಮ್. ಸುಂದರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News