ಸರಕಾರ, ಬಿಸಿಸಿಐ ನಿರ್ದೇಶನ ಪಾಲಿಸಿದ್ದೇವೆ: ಸೂರ್ಯಕುಮಾರ್
ಸೂರ್ಯಕುಮಾರ್ ಯಾದವ್ | PC :PTI
ದುಬೈ: ಪಾಕಿಸ್ತಾನಿ ಆಟಗಾರರಿಗೆ ಹಸ್ತಲಾಘವ ಮಾಡದೇ ಇರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ‘‘ತಂಡದ ಕ್ರಮವು ಭಾರತ ಸರಕಾರ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ)ನಿರ್ದೇಶನಗಳಿಗೆ ಅನುಗುಣವಾಗಿದೆ. ಇದು ನನ್ನ ಒಬ್ಬನ ನಿರ್ಧಾರವಲ್ಲ’’ ಎಂದು ಒತ್ತಿ ಹೇಳಿದ್ದಾರೆ.
‘‘ನಾವು ಸರಕಾರ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ದೇಶನವನ್ನು ಪಾಲಿಸಿದ್ದೇವೆ’’ ಎಂದು ಏಶ್ಯ ಕಪ್ ಪಂದ್ಯದಲ್ಲಿ ಔಟಾಗದೆ 47 ರನ್ ಗಳಿಸಿ ಭಾರತ ತಂಡದ ಗೆಲುವಿಗೆ ನೆರವಾಗಿದ್ದ ಯಾದವ್ ಹೇಳಿದರು.
‘‘ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಪಶುಗಳಾಗಿರುವ ಹಾಗೂ ಅವರ ಕುಟುಂಬಗಳ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ಜೀವನದಲ್ಲಿ ಕೆಲವು ವಿಷಯಗಳು ಕ್ರೀಡಾ ಮನೋಭಾವಕ್ಕಿಂತ ಮುಂದಿವೆ ಎಂದು ನಾನು ಭಾವಿಸುವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎಲ್ಲ ಬಲಿಪಶುಗಳೊಂದಿಗೆ ನಾವು ನಿಲ್ಲುತ್ತೇವೆ ಎಂದು ಮೊದಲೇ ಹೇಳಿದ್ದೆ. ಆಪರೇಶನ್ ಸಿಂಧೂರದಲ್ಲಿ ಭಾಗವಹಿಸಿದ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾವು ಈ ಗೆಲುವನ್ನು ಅರ್ಪಿಸುತ್ತೇವೆ’’ ಎಂದು ಯಾದವ್ ಹೇಳಿದರು.
ಪಾಕಿಸ್ತಾನ ತಂಡವು ಪಂದ್ಯದ ನಂತರದ ಸಮಾರಂಭಕ್ಕೆ ನಾಯಕ ಸಲ್ಮಾನ್ ಅಲಿ ಅವರನ್ನು ಕಳುಹಿಸಲು ನಿರಾಕರಿಸಿತು. ತಂಡದ ವ್ಯವಸ್ಥಾಪಕ ನವೀದ್ ಚೀಮಾ, ಪಂದ್ಯ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರ ಮುಂದೆ ಪ್ರತಿಭಟನೆ ವ್ಯಕ್ತಪಡಿಸಿದರು.
ರವಿವಾರ ನಡೆದ ಏಶ್ಯ ಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡವನ್ನು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ನೇತೃತ್ವದಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್‌ಗೆ ನಿಯಂತ್ರಿಸಿದ ಭಾರತ ತಂಡವು 15.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.
ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತವು ಸೂಪರ್-4 ಹಂತಕ್ಕೆ ತನ್ನ ಸ್ಥಾನವನ್ನು ಬಹುತೇಕ ಖಚಿತಡಿಸಿಕೊಂಡಿದೆ. ಸೋತ ಹೊರತಾಗಿಯೂ ಪಾಕಿಸ್ತಾನ ತಂಡವು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದು, ಬುಧವಾರ ಯುಎಇ ತಂಡವನ್ನು ಎದುರಿಸಲಿದೆ.