ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್: ರೋಹನ್ ಬೋಪಣ್ಣ, ಮ್ಯಾಥ್ಯೂ ಎಬ್ಡೆನ್ ಸೆಮಿ ಫೈನಲ್ ಗೆ
ರೋಹನ್ ಬೋಪಣ್ಣ, ಫೋಟೋ: ಟ್ವಿಟರ್@NDTV
ಲಂಡನ್: ಭಾರತದ ಅಗ್ರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ತಮ್ಮ ಕನಸಿನ ಓಟವನ್ನು ಮುಂದುವರೆಸಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಬುಧವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿಯು ಡಚ್ ಜೋಡಿ ಟ್ಯಾಲನ್ ಗ್ರೀಕ್ಸ್ಪೂರ್ ಹಾಗೂ ಬಾರ್ಟ್ ಸ್ಟೀವನ್ಸ್ ವಿರುದ್ಧ 6-7 (6-3) 7-5 6-2 ಸೆಟ್ ಗಳ ಅಂತರದಿಂದ ಜಯಗಳಿಸಿತು.
43 ವರ್ಷ ವಯಸ್ಸಿನ ಬೋಪಣ್ಣ ಇದೀಗ ವಿಂಬಲ್ಡನ್ ಟೂರ್ನಿಯಲ್ಲಿ . 2015 ರ ನಂತರ ಮೊದಲ ಬಾರಿಗೆ ಮೂರನೇ ಬಾರಿ ಸೆಮಿಫೈನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ಯು ಎಸ್ ಓಪನ್ ರನ್ನರ್ ಅಪ್ ಆಗಿದ್ದ ಬೋಪಣ್ಣ ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ನಾಲ್ಕು ಬಾರಿ ಗ್ರ್ಯಾನ್ ಸ್ಲಾಮ್ ಸೆಮಿಫೈನಲ್ ಆಡಿದ್ದಾರೆ.
ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿ ಇದೀಗ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಲು ಅಗ್ರ ಶ್ರೇಯಾಂಕದ ಡಚ್-ಬ್ರಿಟಿಷ್ ಜೋಡಿ ವೆಸ್ಲಿ ಕೂಲ್ ಹೋಫ್ ಹಾಗೂ ನೀಲ್ ಸ್ಕುಪ್ಸ್ಕಿ ವಿರುದ್ಧ ಸೆಣಸಾಡಲಿದೆ.