×
Ad

ವಿಶ್ವಕಪ್ 2023: ಹೈದರಾಬಾದ್ ಕ್ರಿಕೆಟ್ ಕ್ರೀಡಾಂಗಣದ ಆಸನಗಳು ಹಕ್ಕಿಗಳ ಹಿಕ್ಕೆಗಳಿಂದ ತುಂಬಿರುವ ಚಿತ್ರಗಳು ವೈರಲ್

Update: 2023-10-06 17:43 IST

Photo : twitter\C.VENKATESH

ಹೈದರಾಬಾದ್: ಬಹುನಿರೀಕ್ಷಿತ ವಿಶ್ವಕಪ್ 2023 ಪಂದ್ಯಾವಳಿಯ ಮೂರು ಕ್ರಿಕೆಟ್ ಪಂದ್ಯಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ಕ್ರೀಡಾಂಗಣದ ಕಳಪೆ ನಿರ್ವಹಣೆಗಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಮತ್ತೊಮ್ಮೆ ತೀವ್ರ ಟೀಕೆಗಳಿಗೆ ಗುರಿಯಾಗಿದೆ. ಕ್ರೀಡಾಂಗಣದ ಆಸನಗಳು ಧೂಳು ಮತ್ತು ಹಕ್ಕಿಗಳ ಹಿಕ್ಕೆಗಳಿಂದ ಆವೃತವಾಗಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರತಿಷ್ಠಿತ ಅಂತರರಾಷ್ಟ್ರೀಯ ಪಂದ್ಯಾವಳಿಯ ಕೆಲವು ಪಂದ್ಯಗಳನ್ನು ಆಯೋಜಿಸುತ್ತಿರುವ ಎಚ್‌ಸಿಎ ಆಡಳಿತಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ ಎಂದು thenewsminute.com ವರದಿ ಮಾಡಿದೆ.

ಅ.3ರಂದು, ಮಂಗಳವಾರ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಉಪಸ್ಥಿತರಿದ್ದ ಕ್ರಿಕೆಟ್ ವಿಶ್ಲೇಷಕ ಮತ್ತು ವೀಕ್ಷಕ ವಿವರಣೆಕಾರ ಸಿ.ವೆಂಕಟೇಶ ಅವರು, ಕ್ರೀಡಾಂಗಣದಲ್ಲಿಯ ಆಸನಗಳ ಚಿತ್ರಗಳನ್ನು Xನಲ್ಲಿ ಹಂಚಿಕೊಂಡು ಅವುಗಳ ದುಃಸ್ಥಿತಿಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಕಳಪೆ ನಿರ್ವಹಣೆಯ ಆರೋಪಕ್ಕೆ ಗುರಿಯಾಗಿರುವುದು ಇದೇ ಮೊದಲೇನಲ್ಲ. ಈ ವರ್ಷದ ಪೂರ್ವಾರ್ಧದಲ್ಲಿ ನಡೆದಿದ್ದ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿಯೂ ಆಡಳಿತದ ವಿರುದ್ಧ ಇಂತಹುದೇ ದೂರುಗಳಿದ್ದವು.

ಚಿತ್ರಗಳು ವೈರಲ್ ಆದ ಬಳಿಕ ವೆಂಕಟೇಶ್ ಅವರು, ಅಸ್ವಚ್ಛ ಆಸನಗಳು ಪಶ್ಚಿಮ ಟೆರೇಸ್ ಸ್ಟ್ಯಾಂಡ್‌ಗೆ ಸೀಮಿತವಾಗಿವೆ, ಕ್ರೀಡಾಂಗಣದ ಉಳಿದ ಭಾಗವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

‘ಉಪ್ಪಲ್ ಸ್ಟೇಡಿಯಮ್‌ನ ಕೆಲವು ಸ್ಟ್ಯಾಂಡ್‌ಗಳಲ್ಲಿ ಆಸನಗಳ ದುಃಸ್ಥಿತಿಯ ಕುರಿತು ನನ್ನ ಟ್ವೀಟ್‌ಗಳು ವೈರಲ್ ಆಗಿವೆ. ದೇಶದ ಹೊರಗಿನ ಕೆಲವರು ಇದರ ಲಾಭವನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಕ್ರೀಡಾಂಗಣವನ್ನು ಹೊಚ್ಚ ಹೊಸ ಆಸನಗಳೊಂದಿಗೆ ನವೀಕರಿಸಲಾಗಿದೆ ಮತ್ತು ಕೇವಲ ಪಶ್ಚಿಮ ಟೆರೇಸ್ ಸ್ಟ್ಯಾಂಡ್‌ನ ಆಸನಗಳು ಕೆಟ್ಟದಾಗಿವೆ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ವಿಶ್ವಕಪ್‌ಗೆ ಮುನ್ನ ಎಲ್ಲ ಆಸನಗಳನ್ನು ಬದಲಿಸಲು ಸಾಕಷ್ಟು ಸಮಯಾವಕಾಶ ಎಚ್‌ಸಿಗೆ ಸಿಕ್ಕಿರಲಿಲ್ಲ ಎಂಬಂತೆ ತೋರುತ್ತಿದೆ. ಆದರೆ ಪಂದ್ಯಕ್ಕೆ ಮುನ್ನ ಅವರು ಹಳೆಯ ಆಸನಗಳನ್ನು ಸ್ವಚ್ಛಗೊಳಿಸಬೇಕಿತ್ತು. ಕ್ರೀಡಾಂಗಣದಲ್ಲಿಯ ಉಳಿದ ಸೌಲಭ್ಯಗಳು ಅತ್ಯುತ್ತಮವಾಗಿವೆ ಮತ್ತು ಭಾರತದ ಆತಿಥ್ಯ ಸಾಮರ್ಥ್ಯದ ಬಗ್ಗೆ ಯಾರಿಗೂ ಯಾವುದೇ ಅನುಮಾನಗಳು ಬೇಡ’ ಎಂದು ವೆಂಕಟೇಶ ಹೇಳಿದ್ದಾರೆ.

ಶುಕ್ರವಾರ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್-ಪಾಕಿಸ್ತಾನ ನಡುವಿನ ಪಂದ್ಯ ನಡೆಯುತ್ತಿದ್ದು,ಅ.9ರಂದು ನ್ಯೂಝಿಲ್ಯಾಂಡ್-ನೆದರ್‌ಲ್ಯಾಂಡ್ಸ್ ಮತ್ತು ಅ.12ರಂದು ಪಾಕಿಸ್ತಾನ-ಶ್ರೀಲಂಕಾ ಪಂದ್ಯಗಳು ನಡೆಯಲಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News