ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್ | ಭಾರತದ ಅನೀಶ್ ಭನ್ವಾಲಾಗೆ ಬೆಳ್ಳಿ
ಅನೀಶ್ ಭನ್ವಾಲಾ | Photo Credit : indianexpress.com
ಹೊಸದಿಲ್ಲಿ, ನ.10: ಈಜಿಪ್ಟ್‌ನ ಕೈರೊದಲ್ಲಿ ರವಿವಾರ ನಡೆದ ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್‌ನ ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಅನೀಶ್ ಭನ್ವಾಲಾ ಬೆಳ್ಳಿ ಪದಕ ಜಯಿಸಿದ್ದು, ಈ ಮೂಲಕ ದೇಶಕ್ಕೆ 5ನೇ ಪದಕ ಗೆದ್ದುಕೊಟ್ಟರು.
23ರ ಹರೆಯದ ಅನೀಶ್ ತನ್ನ ಚೊಚ್ಚಲ ವೈಯಕ್ತಿಕ ವಿಶ್ವ ಚಾಂಪಿಯನ್ ಶಿಪ್ ಪದಕ ಗೆಲ್ಲಲು ನಾಲ್ಕು ಶೂಟ್‌ಆಫ್ ಪಂದ್ಯಗಳನ್ನು ಆಡಿದ್ದರು.
8 ಸೀರೀಸ್ ಅಂತ್ಯದಲ್ಲಿ ಅನೀಶ್ 28 ಅಂಕ ಗಳಿಸಿದ್ದು, ಚಿನ್ನದ ಪದಕ ವಿಜೇತ ಫ್ರಾನ್ಸ್‌ನ ಕ್ಲೆಮೆಂಟ್ ಬೆಸಾಗೆಟ್ಸ್‌ಗಿಂತ(29 ಅಂಕ)ಸ್ವಲ್ಪ ಹಿಂದೆ ಬಿದ್ದರು. ಉಕ್ರೇನ್ ನ ಮ್ಯಾಕ್ಸಿಮ್ ಹೊರೊಡಿನೆಟ್ಸ್ 25 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು.
585 ಅಂಕ ಗಳಿಸಿ ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾನ ಪಡೆದಿದ್ದ ಭನ್ವಾಲಾ ಮೊದಲ ನಾಲ್ಕು ಸಿರೀಸ್ ನಂತರ 20ರಲ್ಲಿ 16ನೇ ಸ್ಥಾನ ಪಡೆದರು.
ಈ ವರ್ಷಾರಂಭದಲ್ಲಿ ಭನ್ವಾಲಾ ಅವರು ಕಝಕ್ ಸ್ತಾನದ ಶಿಮ್ ಕೆಂಟ್‌ನಲ್ಲಿ ಏಶ್ಯನ್ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.