ಬೆನ್ನು ಬೆನ್ನಿಗೆ 5 ಪಂದ್ಯಗಳನ್ನು ಗೆದ್ದ ಆರ್ ಸಿ ಬಿ ಗೆ ಝಹೀರ್ ಖಾನ್ ಶ್ಲಾಘನೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ , ಝಹೀರ್ ಖಾನ್
ಹೊಸದಿಲ್ಲಿ : ಸತತ ಆರು ಸೋಲುಗಳನ್ನು ಅನುಭವಿಸಿದ ಬಳಿಕ, ಒಂದು ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 2024ರ ಐಪಿಎಲ್ ಅಭಿಯಾನ ಬಹುತೇಕ ಮುಕ್ತಾಯಗೊಂಡಿತು ಎಂಬುದಾಗಿ ಹೆಚ್ಚಿನವರು ಭಾವಿಸಿದ್ದರು. ಆದರೆ, ಈಗ ಅದು ಅಮೋಘ ಪ್ರತಿ ಹೋರಾಟವನ್ನು ನೀಡುತ್ತಿದ್ದು, ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ತೀವ್ರ ಸ್ಪರ್ಧೆ ನೀಡುತ್ತಿದೆ.
ಈಗ ಸತತ ಐದು ವಿಜಯಗಳನ್ನು ಗಳಿಸಿರುವ ಆರ್ ಸಿ ಬಿ ಯು ಪ್ಲೇ ಆಫ್ ಸ್ಥಾನದ ಬೇಟೆಯಲ್ಲಿದೆ. ಮೂರನೇ ಮತ್ತು ನಾಲ್ಕನೇ ಪ್ಲೇಆಫ್ ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ತಂಡಗಳಿಗೆ ಅದು ಈಗ ಪ್ರತಿಸ್ಪರ್ಧೆ ನೀಡುತ್ತಿದೆ.
ಆರ್ ಸಿ ಬಿ ಯ ಈ ಹೊಸ ಪ್ರವೃತ್ತಿಯನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಝಹೀರ್ ಖಾನ್ ಸೇರಿದಂತೆ ಹಲವರು ಕೊಂಡಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯಾರ್ಧದಲ್ಲಿ ಅದು ನೀಡಿರುವ ಪ್ರತಿ ಹೋರಾಟ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ.
ಇಂಥ ಅಮೂಲಾಗ್ರ ಬದಲಾವಣೆಗಳು ಸುಲಭದಲ್ಲಿ ಸಂಭವಿಸುವುದಿಲ್ಲ, ಭಯಾನಕ ಆರಂಭದ ಬಳಿಕ ತಂಡವು ಪುಟಿದೆದ್ದ ರೀತಿಯನ್ನು ಝಹೀರ್ ಖಾನ್ ಶ್ಲಾಘಿಸಿದ್ದಾರೆ.
ರವಿವಾರ ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಮ್ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ ಗಳಿಂದ ಸೋಲಿಸಿದೆ.
‘‘ಅವರು ಬೆನ್ನು ಬೆನ್ನಿಗೆ ಆರು ಪಂದ್ಯಗಳನ್ನು ಸೋತರು. ಮತ್ತು ಈಗ ಬೆನ್ನು ಬೆನ್ನಿಗೆ ಐದು ಜಯಗಳನ್ನು ದಾಖಲಿಸಿದ್ದಾರೆ. ಇದು ಕ್ರೀಡೆಯ ಬಗ್ಗೆ ಮೋಹವಿಲ್ಲದೆ ಸಾಧ್ಯವಾಗುವುದಿಲ್ಲ. ಹಾಗಾಗಿ, ನಾವು ಅದನ್ನು ಮೆಚ್ಚಲೇಬೇಕು. ಇಷ್ಟೊಂದು ಪಂದ್ಯಗಳನ್ನು ಸೋತ ಬಳಿಕ ತಂಡವೊಂದು ಈ ರೀತಿಯಲ್ಲಿ ಪ್ರತಿ ಹೋರಾಟ ನೀಡಿರುವುದು ಸಾಮಾನ್ಯವಾಗಿ ನಮಗೆ ನೋಡಲು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಆರ್ ಸಿ ಬಿ ಯನ್ನು ಅಭಿನಂದಿಸಬೇಕಾಗುತ್ತದೆ. ಅವರು ರನ್ ರೇಟ್ ಕೂಡ ಉತ್ತಮ ಪಡಿಸಿಕೊಂಡಿದ್ದಾರೆ. ಫೈನಲ್ ಪಂದ್ಯದವರೆಗೂ ಅವರೆಣಿಸಿದಂತೆ ನಡೆದರೆ ಇದೊಂದು ಅತ್ಯುತ್ತಮ ಪ್ರತಿ ಹೋರಾಟವಾಗಿರುತ್ತದೆ’’ ಎಂದು ಜಿಯೋ ಸಿನೇಮಾದಲ್ಲಿ ಮಾತನಾಡಿದ ಝಹೀರ್ ಖಾನ್ ಹೇಳಿದ್ದಾರೆ.