×
Ad

ಅಜಿತ್ ಪವಾರ್ ಸಾವು ಆಘಾತಕಾರಿ; ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ತಿಮ್ಮಾಪುರ ರಾಜಿನಾಮೆಗೆ ಒತ್ತಾಯ; ವಿಪಕ್ಷಗಳ ಉತ್ಪ್ರೇಕ್ಷೆ

Update: 2026-01-28 14:08 IST

ಬೆಂಗಳೂರು, ಜ. 28: “ಅಜಿತ್ ಪವಾರ್ ಅವರ ಸಾವು ಆಘಾತಕಾರಿ. ಈ ಸುದ್ದಿ ಕೇಳಿ ನನಗೂ ಗಾಬರಿಯಾಯಿತು. ರಾಜಕಾರಣಿಗಳಾದ ನಾವು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಪ್ರಯಾಣ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕಾಗಿದೆ. ಹೀಗೆ ಅನೇಕ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬುಧವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಅಜಿತ್ ಪವಾರ್ ಅವರು ಅತ್ಯಂತ ಪ್ರಗತಿಪರ ಆಲೋಚನೆ ಹೊಂದಿದ್ದ ನಾಯಕ. ಎಲ್ಲಾ ಕೆಲಸಗಳಿಗೂ ಸಹಕಾರ ನೀಡುತ್ತಿದ್ದ ನಾಯಕರೆಂದು ಮೊನ್ನೆಯಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಹೇಳಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಕುಟುಂಬದವರು ಬೆಂಗಳೂರಿನಲ್ಲೂ ನೆಂಟಸ್ಥಿಕೆ ಬೆಳೆಸಿದ್ದಾರೆ. ಮಂಗಳವಾರ ಅವರ ಸಂಬಂಧಿಕರನ್ನು ನಾನು ಭೇಟಿ ಮಾಡಿದ್ದೆ,” ಎಂದು ಹೇಳಿದರು.

“ಅಜಿತ್ ಪವಾರ್ ಅವರು ಹಿರಿಯ ನಾಯಕರು. ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಮರಳಿ ಬಂದಿದ್ದರು. ಆ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಪ್ರಸ್ತುತ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು,” ಎಂದರು.

ಇತ್ತೀಚೆಗೆ ಸಂಭವಿಸುತ್ತಿರುವ ವಿಮಾನ ಅಪಘಾತಗಳು ಹಾಗೂ ತಾಂತ್ರಿಕ ದೋಷಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಕುರಿತು ವಿಸ್ತೃತ ವರದಿ ಬಂದ ನಂತರ ಮಾತನಾಡುತ್ತೇನೆ. ತಾಂತ್ರಿಕ ದೋಷಗಳ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಮುಂಬೈನಲ್ಲಿರುವ ಗೆಳೆಯರು ಸೇರಿದಂತೆ ಹಲವರು ವಿಷಯವನ್ನು ತಿಳಿಸಿದ್ದಾರೆ,” ಎಂದು ಹೇಳಿದರು.

ಆರ್.ಬಿ. ತಿಮ್ಮಾಪುರ ಅವರ ರಾಜಿನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವ ಕುರಿತು ಕೇಳಿದಾಗ, “ನನ್ನ ಅಭಿಪ್ರಾಯದಲ್ಲಿ ಆರ್.ಬಿ. ತಿಮ್ಮಾಪುರ ಅವರಿಗೂ ಆ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ವಿಪಕ್ಷಗಳು ಉದ್ದೇಶಪೂರ್ವಕವಾಗಿ ವಿಷಯವನ್ನು ಉತ್ಪ್ರೇಕ್ಷೆ ಮಾಡುತ್ತಿವೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ವಿವರವಾಗಿ ಚರ್ಚಿಸಿ ನಂತರ ಸ್ಪಷ್ಟನೆ ನೀಡುತ್ತೇನೆ. ಇದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News