×
Ad

ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಸ್ಥಾನಮಾನ; ಸಿಎಂ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ: ಸಚಿವ ತಂಗಡಗಿ ಭರವಸೆ

Update: 2026-01-28 14:35 IST

ಬೆಂಗಳೂರು,ಜ.28- ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ  ನೀಡುವ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಸಲಾಗುವವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. 

ಬುಧವಾರ ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಆಡಳಿತ ಪಕ್ಷದ ಸದಸ್ಯಅಶೋಕ್‍ಕುಮಾರ್ ರೈ  ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತುಳು ಭಾಷೆಯ ಸ್ವರೂಪ, ಇತಿಹಾಸ,  ಸಾಹಿತ್ಯ, ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ, ಸಂಸ್ಕೃತಿ, ಶಾಸನಗಳ ರಚನೆ ಕುರಿತು ಅಧ್ಯನ ನಡೆಸಿ ಡಾ.ಮೋಹನ್ ಆಳ್ವ ಸಮಿತಿ 2023ರ ಫೆ.14ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ ಎಂದರು.

ಆ ವರದಿಯನ್ನು ಆಧರಿಸಿ ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದು, ಹೆಚ್ಚುವರಿ ಅಧಿಕೃತ ಭಾಷೆಗಳ ಘೋಷಣೆಗೆ ರಾಜ್ಯ ಸರಕಾರಗಳಿಗೆ ಅವಕಾಶ ಇದೆ. ಇದನ್ನು ಆಧರಿಸಿ  ಆಂಧ್ರಪ್ರದೇಶದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ  ನಿಯೋಗವನ್ನು ಕಳುಹಿಸಲಾಗಿತ್ತು. ಸದರಿ ನಿಯೋಗ ವರದಿ ನೀಡಿದ ಬಳಿಕ ಅದರ ಆಧಾರದ ಮೇಲೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಕರಾವಳಿ ಭಾಗದ ಶಾಸಕರ ಜೊತೆ ಸಭೆ ನಡೆಸಲಾಗುವುದು ಎಂದು ಅವರು ಭರಸೆ ನೀಡಿದರು.

ಆರಂಭದಲ್ಲಿ ಮಾತನಾಡಿದ ಸದಸ್ಯ ಅಶೋಕ್ ಕುಮಾರ್ ರೈ, ತುಳು ಭಾಷೆಗೆ 3 ಸಾವಿರ ವರ್ಷಗಳ ಇತಿಹಾಸವಿದೆ. ಲಿಪಿಯೂ ಇದೆ. ಗೂಗಲ್‍ನಲ್ಲಿ ತುಳುವಿನ ಭಾಷಾಂತರಕ್ಕೆ ಅವಕಾಶವಿದೆ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ತುಳು ಭಾಷೆಯ ಅಧ್ಯಯನವಾಗುತ್ತಿದೆ.  ಅದೇ ರೀತಿ ರಾಜ್ಯದಲ್ಲೂ ತುಳು  ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕೆಂದು ಮನವಿ ಮಾಡಿದರು. 

ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಮಾತನಾಡಿ, ಅಸ್ಸಾಂ ಮತ್ತು ಪ್ರಶ್ಚಿಮ ಬಂಗಾಳದಲ್ಲಿ ತಲಾ 8 ಭಾಷೆಗಳನ್ನು ಹೆಚ್ಚುವರಿ ಅಧಿಕೃತ ಭಾಷೆಗಳೆಂದು ಪರಿಗಣಿಸಲಾಗಿದೆ. ಆಂಧ್ರದಲ್ಲಿ  ಉರ್ದು ಭಾಷೆಯನ್ನು ಅಧಿಕೃತ ಎಂದು ಪರಿಗಣಿಸಲಾಗಿದೆ . ರಾಜ್ಯದಲ್ಲೂ ತುಳು ಭಾಷೆಗೆ   ಮಾನ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಸದಸ್ಯರು ತುಳು ಭಾಷೆಯಲ್ಲೆ ಮಾತನಾಡಿದ್ದು ಅರ್ಥವಾಗದ ಕಾರಣ ನಮ್ಮ ನೆರವಿಗೆ ಬರಬೇಕು ಎಂದು ಸಚಿವ ತಂಗಡಗಿ ಕೋರಿದರು. ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ತುಳು ನಾಡಿನವರು ಟೀಕೆಯನ್ನಾಗಲಿ, ಹೊಗಳಿಕೆಯನ್ನಾಗಲಿ ಪ್ರೀತಿಯಿಂದ ಮಾಡುತ್ತಾರೆ ಎಂದು ಹೇಳಿ ಸಮಾಧಾನಪಡಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News