ಕೆಎಫ್‌ಸಿಸಿ ಚುನಾವಣೆ; ಮತದಾರರ ಪಟ್ಟಿ ಪ್ರಕಟಣೆ ಕುರಿತ ದಾಖಲೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
Photo credit: PTI
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಚುನಾವಣೆ ಘೋಷಿಸುವುದಕ್ಕೂ ಮುನ್ನ ಬೈಲಾ ಪ್ರಕಾರ ಮತದಾರರ ಪಟ್ಟಿ ಪ್ರಕಟಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಕೆಎಫ್‌ಸಿಸಿ ಹಾಗೂ ಚುನಾವಣಾಧಿಕಾರಿಗೆ ನಿರ್ದೇಶಿಸಿರುವ ಹೈಕೋರ್ಟ್, ಯಾವುದೇ ರೀತಿಯ ಅನುಮಾನಗಳು ಬಂದರೂ ಚುನಾವಣೆಗೆ ತಡೆ ನೀಡುವ ಜತೆಗೆ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಚುನಾವಣಾ ಅಭ್ಯರ್ಥಿಯಾಗಿರುವ ಬೆಂಗಳೂರಿನ ಎನ್ನಾರ್ ಕೆ. ವಿಶ್ವನಾಥ್ (N.R.K. Vishwanath) ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, ಕೆಎಫ್‌ಸಿಸಿಗೆ ಜನವರಿ 31ರಂದು ಚುನಾವಣೆ ಘೋಷಿಸಲಾಗಿದೆ. ಜನವರಿ 14ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅದರ ಹಿಂದಿನ ದಿನ ಬೈಲಾಗೆ ವಿರುದ್ಧವಾಗಿ ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ನ್ಯಾಯಾಲಯಕ್ಕೆ ಯಾವುದೇ ಅನುಮಾನ ಬಂದರೆ ಚುನಾವಣೆಗೆ ತಡೆ ನೀಡಲಾಗುವುದು. ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿದು ಸಲ್ಲಿಸಿ. ಸಲ್ಲಿಕೆ ಮಾಡುವ ದಾಖಲೆಗಳು ಸರಿಯಾಗಿದ್ದರೆ ಉತ್ತಮ, ಇಲ್ಲವಾದರೆ ಅದು ಗಂಭೀರ ಸಮಸ್ಯೆಯಾಗಲಿದೆ. ನೀವು ಅಗತ್ಯವಾದ ಎಲ್ಲ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡದಿದ್ದರೆ ನಿರ್ಣಯ ಕೈಗೊಳ್ಳಲು ನ್ಯಾಯಾಲಯ ಹೆದರುವುದಿಲ್ಲ ಎಂದು ಕೆಎಫ್‌ಸಿಸಿ ಮತ್ತು ಚುನಾವಣಾಧಿಕಾರಿಯನ್ನು ಕುರಿತು ಹೇಳಿತು.
ಚುನಾವಣಾಧಿಕಾರಿ ಸುರೇಶ್ ಬಫ್ನಾ ಪರ ಹಾಜರಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ಡಿಸೆಂಬರ್‌ನಲ್ಲಿ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿತ್ತು. ಜನರು ಅದರ ಪ್ರತಿ ತೆಗೆದುಕೊಂಡಿದ್ದಾರೆ ಎಂದರು. ಆಗ ನ್ಯಾಯಮೂರ್ತಿಗಳು, ಅದಕ್ಕೆ ದಾಖಲೆ ಏನಿದೆ? ಚುನಾವಣಾಧಿಕಾರಿಯಾಗಿ ನೀವು ಏನು ಹೇಳುತ್ತೀರಿ? ಮತದಾರರ ಪಟ್ಟಿ ಪ್ರಕಟಿಸಿದ್ದರೆ ಅದಕ್ಕೆ ದಾಖಲೆ ಎಲ್ಲಿ? ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರನ್ನು ಪ್ರಶ್ನಿಸಲು ದಾಖಲೆ ಏನಿದೆ? ಎಂದರು.
ಉದಯ ಹೊಳ್ಳ ಪ್ರತಿಕ್ರಿಯಿಸಿ, ಕೆಎಫ್‌ಸಿಸಿ ಮತದಾರರ ಪಟ್ಟಿ ಪ್ರಕಟಿಸಿದ್ದು, ನಮಗೆ ಡಿಸೆಂಬರ್‌ನಲ್ಲಿ ಪ್ರತಿ ನೀಡಲಾಗಿದೆ. ಸಿವಿಲ್ ದಾವೆ ಹೂಡಿರುವ ಅರ್ಜಿದಾರರು ಅದನ್ನು ಮುಚ್ಚಿಟ್ಟು, ಈಗ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದೇ ಆಧಾರದಲ್ಲಿ ಅರ್ಜಿ ವಜಾಗೊಳಿಸಬೇಕು. ಎರಡನೆಯದಾಗಿ ಎನ್ನಾರ್ ಕೆ. ವಿಶ್ವನಾಥ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹೆಚ್ಚೆಂದರೆ 14 ದಿನ ಚುನಾವಣೆ ಮುಂದೂಡಬಹುದು ಎಂದರು.
ಅದಕ್ಕೆ ನ್ಯಾಯಪೀಠ, ಅಷ್ಟೇ, ಚುನಾವಣಾಧಿಕಾರಿ ಮತ್ತು ಮಂಡಳಿಯು ಅರ್ಜಿದಾರರ ಮನವಿಯನ್ನು ಚುನಾವಣೆಗೂ ಮುನ್ನ ಪರಿಹರಿಸಲು ಮುಂದಾಗಬಹುದು ಎಂದು ಹೇಳಿದ್ದಲ್ಲದೆ, ಕೆಎಫ್‌ಸಿಸಿ ಪರ ವಕೀಲ ಧನರಾಜ್ ಅವರನ್ನು ಕುರಿತು, ಏನಾದರೂ ಮುಚ್ಚು ಮರೆ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ಕಣ್ಣಾಮುಚ್ಚಾಲೆ ಆಡಿದರೆ ಅದರ ವಿರುದ್ಧ ಕ್ರಮ ಖಂಡಿತಾ ಎಂದು ಎಚ್ಚರಿಕೆ ನೀಡಿ, ವಿಚಾರಣೆಯನ್ನು ಗುರುವಾರಕ್ಕೆ (ಜನವರಿ 29) ಮುಂದೂಡಿತು.