ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ : ಕೇಂದ್ರ ಸರ್ಕಾರ ತನಿಖೆ ನಡೆಸಿ ಉತ್ತರಿಸಲಿ ಎಂದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
ಮೈಸೂರು : ದಿಲ್ಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಿ ಉತ್ತರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯ ಸಂದರ್ಭದಲ್ಲಿ ಆಗುತ್ತಿರುವ ಬಾಂಬ್ ಬ್ಕಾಸ್ಟ್ ಬಗ್ಗೆ ಕೇಂದ್ರ ಸರ್ಕಾರವೇ ಉತ್ತರಿಸಬೇಕು. ಈ ಬಗ್ಗೆ ತನಿಖೆ ನಡೆಸಿ ಉತ್ತರಿಸಲಿ ಎಂದರು.
ಬಾಂಬ್ ಬ್ಲಾಸ್ಟ್ ಗಳು ಆಗಬಾರದು. ಅಮಾಯಕರ ಜೀವ ಹಾನಿ ಬೇಸರದ ಸಂಗತಿ. ಬಾಂಬ್ ದಾಳಿಯಲ್ಲಿ ಸತ್ತವರ ಕುಟುಂಬದ ಜೊತೆ ನಾನಿರುತ್ತೇನೆ ಎಂದು ಹೇಳಿದರು.
ನಿನ್ನೆ ನಡೆದ ಬಾಂಬ್ ಬ್ಲಾಸ್ಟ್ ನಿಂದ ಬಿಹಾರದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಇಂದು ಬಿಹಾರದಲ್ಲಿ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಇದು ಬಿಜೆಪಿ ಪಕ್ಷದ ಮೇಲೆಯೇ ಪರಿಣಾಮ ಬೀರಲಿದೆ ಎಂದು ಹೇಳಿದರು.
ವಿಧಾನಸೌಧದಲ್ಲೂ ಭಯೋತ್ಪಾದಕರಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಭಯೋತ್ಪಾದಕರು ಯಾರು ಎಂದು ಅವರೇ ಹೇಳಬೇಕು, ಅದು ಬಿಟ್ಟು ʼಹಿಟ್ ಅಂಡ್ ರನ್ʼ ರೀತಿಯಲ್ಲಿ ಮಾತನಾಡಬಾರದು ಎಂದು ಹೇಳಿದರು.
ವಿಧಾನಸೌಧದಲ್ಲಿ ನಾವೇ (ಕಾಂಗ್ರೆಸ್) ಇರುವುದು. ಯಾರು ಎಂದು ಹೇಳಬೇಕು. ಸುಮ್ಮನೇ ಆರೋಪ ಮಾಡಬಾರದು. ಇಂತವರು ಭಯೋತ್ಪಾದಕರು ಇದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಹೇಳಿದರು.