ಜನರ ನಡುವೆ ಆರೆಸ್ಸೆಸ್ ಜಗಳ ತಂದಿಡುತ್ತಿದೆ : ಸಚಿವ ದಿನೇಶ್ ಗುಂಡೂರಾವ್
"ಸಮಾಜ ಒಡೆಯುವ ಕೆಲಸವನ್ನಷ್ಟೇ ಆರೆಸ್ಸೆಸ್ ಮಾಡಿದೆ"
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸಮಾಜ ಒಡೆಯುವ ಕೆಲಸ ಮಾಡಿರುವುದು ಮಾತ್ರವಲ್ಲದೆ, ದೇಶದ ಜನರ ನಡುವೆಯೇ ಇವರು ಜಗಳ ತಂದಿಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್‍ನಲ್ಲಿ ಕಪಟನತವಿದೆ. ಆದರೂ, ದೇಶಕಟ್ಟೋಕೆ ಬಂದಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಸತ್ಯಾಂಶ ಎಂದರೆ ಸಮಾಜ ಒಡೆಯುವ ಕೆಲಸವನ್ನಷ್ಟೇ ಆರೆಸ್ಸೆಸ್ ಮಾಡಿದೆ. ಜತೆಗೆ, ದೇಶದ ಜನರ ನಡುವೆಯೇ ಇವರು ಜಗಳ ತಂದಿಡುತ್ತಿದ್ದಾರೆ ಎಂದು ಆರೋಪಿಸಿದರು.
ಆರೆಸ್ಸೆಸ್ ನೋಂದಣಿ ಆಗಿಲ್ಲ ಎಂದಾದರೆ, ಆ ಸಂಸ್ಥೆ ಏನಾಗಿದೆ?. ಇದಕ್ಕೆ ಕೇಂದ್ರ ಕಚೇರಿ, ಸದಸ್ಯರು, ಪದಾಧಿಕಾರಿಗಳು ಏಕೆ? ಬಿಜೆಪಿ ನಾಯಕರು ಸದಸ್ಯರಾಗಿದ್ದೇವೆಂದು ಹೇಳುತ್ತಾರೆ. ಸಂಸ್ಥೆಯೇ ನೋಂದಣಿ ಆಗಿಲ್ಲ ಎಂದರೆ ಇದೆಲ್ಲ ಹೇಗೆ? ಏನು? ಇವರ ಮಾತುಗಳು, ಕಾರ್ಯ ವೈಖರಿ ಅರ್ಥವೇ ಆಗುವುದಿಲ್ಲ ಎಂದು ಸಚಿವರು ಹೇಳಿದರು.
ವಿಧಾನಸೌಧದಲ್ಲೇ ಭಯೋತ್ಪಾದಕರು ಇದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಕೇಂದ್ರದಲ್ಲಿ ದೊಡ್ಡ ಸಚಿವರು, ಅವರಿಗೆ ಮಾಹಿತಿ ಇರಬಹುದು. ಕೇಂದ್ರದ ಸಂಸ್ಥೆಗಳಿಂದ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಹೀಗೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.